ಉಡುಪಿ: ಲೌಕ್ ಡೌನ್ ನಿಯಮವನ್ನು ಉಲ್ಲಂಘಿಸಿ ಯಾವುದೇ ಅನುಮತಿ ಪಡೆಯದೆ ಇಂದು ಅಲೆವೂರಿನ ಗ್ರಾಮದ ಮಂಚಿ ದುಗ್ಲಿಪದವು ಎಂಬಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಸಂಬಂಧಿಸಿ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಂಚಿ ದುಗ್ಲಿಪದವಿನ ಯುವಕ ಹಾಗೂ ಮಂಗಳೂರು ಬೋರುಗುಡ್ಡೆಯ ಯುವತಿಗೆ ಲೌಕ್ ಡೌನ್ ನಿಯಮವನ್ನು ಉಲ್ಲಂಘಿಸಿ ಮದುವೆ ನಡೆಸಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿಯಂತೆ ಉಡುಪಿ ತಹಶೀಲ್ದಾರ್ ಪ್ರದೀಪ್ , ಕಂದಾಯ ನಿರೀಕ್ಷಕ ಶ್ರೀನಿವಾಸ್ ಜತೆಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಪ್ರಕರಣ ತಿಳಿದುಬಂದಿದೆ.
ವಧುವನ್ನು ಯಾವುದೇ ಅನುಮತಿ ಪಡೆಯದೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿಗೆ ಕರೆತರಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ತಹಶೀಲ್ದಾರ್ ನೀಡಿದ ದೂರಿನಂತೆ ವರ ಹಾಗು ವಧು ಸಹಿತ ಮದುವೆಯಲ್ಲಿ ಹಾಜರಾದ ಅಬ್ದುಲ್ ಸುಹೇಲ್, ಅಜರುದ್ದಿನ್, ಮೊಹಮದ್ ಅಶ್ರಫ್, ಶಾಹಿದ್, ಮಹಮ್ಮದ್ ಶರೀಫ್, ಬಕ್ಕಶ್, ಮಹಮ್ಮದ್ ಇಕ್ಬಾಲ್ ಅವರ ಮೇಲೆ ಕ್ರಮಕೈಗೊಳ್ಳಲಾಗಿದೆ. ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.












