ಉಡುಪಿ: ಭಾರತೀಯ ಜೀವ ವಿಮಾನಿಗಮದ ಉಡುಪಿ ವಿಭಾಗಕ್ಕೆ ಸೇರಿದ 57 ಸಾವಿರಕ್ಕೂ ಹೆಚ್ಚಿನ ಮೈಕ್ರೋ ಇನ್ಶೂರೆನ್ಸ್ ಪಾಲಿಸಿದಾರರು ಕಟ್ಟಿದ್ದ ಕೋಟ್ಯಾಂತರ ರೂಪಾಯಿಗಳನ್ನು ಎಲೈಸಿಯೇ ನೇಮಿಸಿದ್ದ ಮಧ್ಯವರ್ತಿಗಳು ಕಬಳಿಸಿದ ಹಗರಣವನ್ನು ಇದೀಗ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ವಿಚಾರಣೆಗಾಗಿ ಸ್ವೀಕರಿಸಿದೆ ಎಂದು ಮಾನವ ಹಕ್ಕು ಪ್ರತಿಷ್ಠಾನ ಅಧ್ಯಕ್ಷ ಡಾ. ರವೀಂದ್ರನಾಥ್ ಶ್ಯಾನುಬಾಗ್ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಮೂರು ವರ್ಷಗಳಿಂದ ಈ ಪ್ರಕರಣದ ಕೂಲಂಕುಶ ತನಿಖೆ ನಡೆಸಿದ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಸಲ್ಲಿಸಿದ ದೂರನ್ನು ಪರಿಶಿಲಿಸಿದ ಆಯೋಗವು ಪಾಲಿಸಿದಾರರಿಗೆ ಅನ್ಯಾಯ ವಾಗಿರುವುದು ಮೇಲ್ನೋಟಕ್ಕೆ ತೋರಿಬಂದಿರುವುದರಿಂದ ವಿಚಾರಣೆಗಾಗಿ ಸ್ವೀಕರಿಸಿದೆ ಎಂದರು.
ಜೀವಾವಿಮಾ ನಿಗಮವು ಮಾರಾಟ ಮಾಡಿರುವ ಸುಮಾರು 57,800ರಷ್ಟು ಪಾಲಿಸಿಗಳಲ್ಲಿ ಶೇಕಡಾ 90 ರಷ್ಟು ಪಾಲಿಸಿಗಳು ರದ್ದಾಗಿರುವ ಈ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷತೊರಿಸಿದ ಎಲೈಸಿಯ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಕಳೆದ ಎರಡು ವರ್ಷಗಳಿಂದ ಪ್ರತಿಷ್ಠಾನವು ನೀಡಿದ ದೂರಿಗೆ ಜೀವಾವಿಮಾ ನಿಗಮದ ಆಡಳಿತ ಹಾಗೂ ಆರ್ಥಿಕ ಸಚಿವಾಲಯದಿಂದ ಯಾವ ಸ್ಪಂದನೆಯೂ ಬಾರದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ದೂರು ನೀಡಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಸುಮಾರು 200ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಎಲೈಸಿಯ ಪರವಾಗಿ ಪಾಲಿಸಿದಾರರಿಂದ ಹಣ ಸಂಗ್ರಹಿಸಿದ ಅಮಾಯಕ ಅಂಗನವಾಡಿ ಕಾರ್ಯಕರ್ತೆಯರು ಪಾಲಿಸಿದಾರರ ಆಕ್ರೋಶಕ್ಕೆ ಬಲಿಯಾಗಿದ್ದರು. ಆಯಾಗ್ರಾಮಗಳಲ್ಲಿದ್ದ ಪಾಲಿಸಿದಾರರಿಂದ ಸಂಗ್ರಹಿಸಿದ ಕೋಟ್ಯಾಂತರ ರೂಪಾಯಿಗಳ ಪ್ರೀಮಿಯಮ್ ಹಣವನ್ನು ಎಲೈಸಿಯೇ ನೇಮಿಸಿದ್ದ ಪ್ರತಿನಿಧಿಗಳಿಗೆ ಹಸ್ತಾಂತರಿಸಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದ ಅಂಗನವಾಡಿ ಕಾರ್ಯಕರ್ತೆಯರು ಇದೀಗ ನಿಟ್ಟುಸಿರು ಬಿಡುವಂತಾಗಿದೆ ಎಂದರು.
ರೋಸಿ ಹೋದ ಪಾಲಿಸಿದಾರರು:
ಪಾಲಿಸಿದಾರರು ಮೋಸಹೋದ ಈ ಸುದ್ದಿ ಕಾಳ್ಗಿಚ್ಚಿನಂತೆ ಚಿಕ್ಕಮಗಳೂರಿನ ಎಲ್ಲಾ ಹಳ್ಳಿಗಳಿಗೂ ತಲುಪಿತು. ಪಾಲಿಸಿದಾರರೆಲ್ಲ ಜೀವ ವಿಮಾ ಕಚೇರಿಗಳನ್ನು ಸಂಪರ್ಕಿಸಿದಾಗ 50,000 ಕ್ಕೂ ಹೆಚ್ಚಿನ ಪಾಲಿಸಿಗಳಿಗೆ ಇದೇ ಗತಿಬಂದಿರುವುದನ್ನು ಗಮನಿಸಲಾಯಿತು. ಹೆಚ್ಚಿನ ಪಾಲಿಸಿದಾರರು ಅವಿದ್ಯಾವಂತರಾಗಿದ್ದುದರಿಂದ ಅವರಿಗೆ ಹಣಲಪಟಾಯಿಸಿದ್ದು ಯಾರು ಎಂಬುದು ತಿಳಿಯಲಿಲ್ಲ, ತಿಳಿಯುವ ಅಗತ್ಯವೂ ಅವರಿಗೆ ಇರಲಿಲ್ಲ. ಏಕೆಂದರೆ ಜೀವವಿಮಾ ನಿಗಮವೆಂದರೇನು, ಎಲೈಸಿಯ ಪ್ರತಿನಿಧಿ ಯಾರು ಎಂಬುದು ಅವರಿಗೆ ಬೇಕಿರಲಿಲ್ಲ. ಅವರಿಂದ ಹಣ ಪಡೆದ ಆಯಾ ಗ್ರಾಮದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆಯರನ್ನೇ ಜವಾಬ್ದಾರರನ್ನಾಗಿಸಿ ಅವರ ಮನೆಗಳಿಗೆ ನುಗ್ಗಿ ಗಲಾಟೆ ಎಬ್ಬಿಸಿದರು ಎಂದವರು ತಿಳಿಸಿದರು.
ಅಧಿಕಾರಿಗಳ ನಿರ್ಲಕ್ಷ:
ಇಷ್ಟಾದರೂ ಉಡುಪಿ ವಿಭಾಗದ ಎಲ್ಲೈಸಿಯ ಅಧಿಕಾರಿಗಳು ಎಚ್ಚೆತ್ತು ಕೊಳ್ಳಲಿಲ್ಲ. ಕೂಡಲೇ ಪೋಲಿಸರಿಗೆ ದೂರುಕೊಟ್ಟಿದ್ದಲ್ಲಿ ಹಣ ಲಪಟಾಯಿಸಿದವರಿಂದ ಅಲ್ಪ ಸ್ವಲ್ಪ ಹಣವನ್ನಾದರೂ ವಶಪಡಿಸಿಕೊಳ್ಳಬಹುದಾಗಿತ್ತು. ಇದಾಗಿ ಸುಮಾರು ಒಂದು ವರ್ಷದ ಅನಂತರ ತರೀಕೆರೆ ಹಾಗೂ ಕಡೂರು ಪೋಲೀಸ್ ಸ್ಟೇಶನ್ಗಳಲ್ಲಿ ಸಮನ್ವಯಂ ಸಂಸ್ಥೆಯ ಮೇಲೆ ದೂರುಗಳು ದಾಖಲಾದವು. ಒಂದೆರಡು ಬಾರಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೋಲಿಸರಿಗೆ ಒದಗಿಸುವುದನ್ನು ಬಿಟ್ಟಲ್ಲಿ ಪ್ರಕರಣಗಳನ್ನು ಬೆನ್ನಟ್ಟುವ ಯಾವುದೇ ಕಾರ್ಯಚರಣೆ ನಿಗಮದ ಅಧಿಕಾರಿಗಳಿಂದ ನಡೆಯಲಿಲ್ಲ. ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ತನಿಖೆ ಪ್ರಾರಂಭವಾದ ನಂತರ ನಿಗಮದ ಅಧಿಕಾರಿಗಳು ಇದೆ ರೀತಿಯಲ್ಲಿ ಹಣ ಲಪಟಾಯಿಸಿದ ಶುಭೋದಯ ಗ್ರಾಮೀಣ ಸಂಸ್ಥೆಯ ಮೇಲೆ ಚಿಕ್ಕಮಗಳೂರಿನ ಗೋಣಿಬೀಡು ಪೋಲಿಸ್ ಠಾಣೆಯಲ್ಲಿ ದೂರು ನೀಡಿದರು. ಈ ಸಂಸ್ಥೆಯಿಂದಲೂ ಹಣ ಲಪಾಟವಣೆಯಾಗಿದೆ ಎಂದು ತಿಳಿಯಲು ಎಲೈಸಿ ಅಧಿಕಾರಿಗಳಿಗೆ ಎರಡು ವರ್ಷಗಳು ಬೇಕಾದವೇ? ಎಂದು ಡಾ.ರವೀಂದ್ರನಾಥ್ ಶ್ಯಾನುಬಾಗ್ ಪ್ರಶ್ನಿಸಿದರು.
ಹಣ ಲಪಟಾಯಿಸುವ ಪ್ಲಾನ್:
ಮಾನವ ಹಕ್ಕುಗಳ ಪ್ರತಿಷ್ಠಾನ ನಡೆಸಿದ ತನಿಖೆಯ ಪ್ರಕಾರ ಇದರ ಪಧಾಧಿಕಾರಿಗಳಾದ ದೇವರಾಜ್, ಗೀರಿಶ್ ಮತ್ತು ಎ.ಎಮ್ ಮೋಹನ್ ಎಂಬುವರು ಈ ಹಿಂದೆ ಸಮನ್ವಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಬ್ಬಂಧಿಗಳಾಗಿದ್ದರು. ಅಲ್ಲಿ ಹಣ ಲಪಟಾಯಿಸುವ ಸಾಧ್ಯತೆಯನ್ನು ಕಂಡು ತಾವೇ ಶುಭೋದಯ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಆಶ್ಚರ್ಯವೆಂದರೆ ಉಡುಪಿಯ ಸೀನಿಯರ್ ಡಿವಿಜ್ನಲ್ ಮ್ಯಾನೆಜರ್ ಆಗಿದ್ದ ಎನ್.ಎಸ್ ಶಿರಹಟ್ಟಿ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಹಾಗಿದ್ದ ಬ್ಯಾಪ್ಟಿಸ್ಟ ಡಿ ಅಲ್ಮೇಡಾ ರವರು ಉಡುಪಿಯ ವಿಭಾಗಿಯ ಕಚೇರಿಯಲ್ಲಿ ಶುಭೋದಯ ಸಂಸ್ಥೆಗೆ ಸೇರಿದ ಮೇಲಿನ ಮೂವರು ಪಧಾಧಿಕಾರಿಗಳನ್ನೂ ಅಧಿಕೃತವಾಗಿ ಸನ್ಮಾನಿಸಿದ್ದರು ! ಏಕೆ ಗೊತ್ತೇ ? ಇವರೆಲ್ಲ ಒಂದೇ ದಿನದಲ್ಲಿ 1310 ಪಾಲಿಸಿಗಳನ್ನು ಮಾರಾಟ ಮಾಡಿದ್ದರಂತೆ ! ಪ್ರತಿಷ್ಠಾನವು ತನಿಖೆ ಮಾಡಿದಾಗ ಅಂದು ಮಾಡಿದ್ದ ಈ ಎಲ್ಲ ಪಾಲಿಸಿಗಳ ಖಾತೆಯಲ್ಲಿ ಕೇವಲ ಒಂದೇ ಕಂತನ್ನು ಎಲೈಸಿಗೆ ಪಾವತಿಯಾಗಿದ್ದು ಈಗ ಅವೆಲ್ಲವೂ ತಮ್ಮ ಅಸ್ಥಿತ್ವವನ್ನೇ ಕಳೆದುಕೊಂಡಿದ್ದವು ಎಂದು ಡಾ.ರವೀಂದ್ರನಾಥ್ ಶ್ಯಾನುಬಾಗ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಂಗನವಾಡಿ ಕಾರ್ಯಕರ್ತರು ಇದ್ದರು.