ವಿದ್ಯಾರ್ಥಿಗಳಿಗೆ ‌ಶೈಕ್ಷಣಿಕ ಶಿಬಿರ ಆಯೋಜಿಸಿದರೆ ಉತ್ತಮ ಫಲಿತಾಂಶ ಸಾಧ್ಯ: ಕೆ. ಮಂಜುಳ

ಉಡುಪಿ: ಪರೀಕ್ಷಾ ತಯಾರಿಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಿಬಿರಗಳನ್ನು ಆಯೋಜಿಸಿದಲ್ಲಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುಳಾ ಹೇಳಿದರು.
ಉದ್ಯಾವರ ಸಂತ ಜೇವಿಯರ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಇಂಟರ್‍ಯಾಕ್ಟ್‌ ಕ್ಲಬ್‌, ರೋಟರಿ ಕ್ಲಬ್‌ ಉಡುಪಿ ಹಾಗೂ ಜಿಲ್ಲಾ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶಾಲೆಯಲ್ಲಿ ಬುಧವಾರ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಶೈಕ್ಷಣಿಕ ಪ್ರೇರಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳಲ್ಲಿ ಅದ್ಭುತ ಪ್ರತಿಭೆ ಹಾಗೂ ವಿಷಯಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಸಾಮರ್ಥ್ಯವಿದೆ. ಅದನ್ನು
ಹೊರತೆಗಿಯುವ ನಿಟ್ಟಿನಿಂದ ಶಿಕ್ಷಣ ಇಲಾಖೆ ಹಲವಾರು ತರಬೇತಿ ಆಯೋಜಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುವ ಕಾರ್ಯಗಳು ನಡೆಯುತ್ತಿವೆ ಎಂದರು.
ತರಬೇತಿ ಶಿಬಿರವನ್ನು ಉದ್ಘಾಟಿಸಿ ರೋಟರಿ ಕ್ಲಬ್‌ ಉಡುಪಿ ರಾಯಲ್‌ ಅಧ್ಯಕ್ಷ ಬಿ.ಕೆ. ಯಶವಂತ್‌ ಮಾತನಾಡಿ, ಹತ್ತನೆ ತರಗತಿ ಮತ್ತ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉಡುಪಿ ಜಿಲ್ಲೆ ಮುಂಚೂಣಿ ಸಾಧಿಸುವಲ್ಲಿ ಇಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಅವರನ್ನು ಪ್ರೋತ್ಸಾಹಿಸುವ ಸಂಘ ಸಂಸ್ಥೆಗಳ ಕೊಡುಗೆ ಬಹಳಷ್ಟಿದೆ. ಈ ರೀತಿಯ ಕಾರ್ಯಾಗಾರಗಳಿಂದ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಲಭಿಸುವುದರ ಜತೆಗೆ ಅವರು ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ದಾಖಲಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಪ್ರವೀಣ್‌ ಗುಡಿ ಮತ್ತು ಬಾಲಕೃಷ್ಣ ಮದ್ದೋಡಿ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಉಡುಪಿ ನಗರಸಭಾ ಸದಸ್ಯ ಮಂಜುನಾಥ್‌ ಮಣಿಪಾಲ, ಶೈಕ್ಷಣಿಕ ಸಂಯೋಜಕಾಧಿಕಾರಿ ಪವನ್‌ ಕುಮಾರ್‌, ಶಿಕ್ಷಕ ಸಂಘದ ಪ್ರಕಾಶ್ ಉಪಸ್ಥಿತರಿದ್ದರು.
ಶಾಲೆಯ ಶಿಕ್ಷಕ ಅನಿಲ್‌ ಕುಮಾರ್‌ ಸ್ವಾಗತಿಸಿದರು. ಶಿಕ್ಷಕಿ ಸಿಂಥಿಯಾ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಸಹನಾ ವಂದಿಸಿದರು.