ಉಡುಪಿ: ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವದ ಹೊರೆಕಾಣಿಕೆ ಸಭೆ

ಉಡುಪಿ: ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥರ ಚತುರ್ಥ ಪರ್ಯಾಯ ಮಹೋತ್ಸವ 2022ರ ಜನವರಿ 17 ಮತ್ತು 18ರಂದು ನಡೆಯಲಿದ್ದು, ಪರ್ಯಾಯ ಮಹೋತ್ಸವದ ಹೊರೆಕಾಣಿಕೆ ಮೆರವಣಿಗೆಯ ಸಭೆ ಸೋಮವಾರ ಮಠದ ಕೃಷ್ಣ ಸಭಾದಲ್ಲಿ ನಡೆಯಿತು.

ವಿದ್ಯಾಸಾಗರ ಶ್ರೀಪಾದರು 2022ರ ಜನವರಿ 10ರಂದು ಪುರಪ್ರವೇಶ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಜನವರಿ 11ರಿಂದ 16 ರ ವರೆಗೆ ಹೊರಕಾಣಿಕೆ ಮೆರವಣಿಗೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಪರ್ಯಾಯೋತ್ಸವ ಸಮಿತಿಯ ಅಧ್ಯಕ್ಷ ಕೆ. ಸೂರ್ಯ ನಾರಾಯಣ ಉಪಾಧ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಚಾಲಕ ಸುಪ್ರಸಾದ್ ಶೆಟ್ಟಿ ಬೈಕಾಡಿ ಅವರು, ಹೊರಕಾಣಿಕೆ ಮರವಣಿಗೆಯ ಪೂರ್ವಬಾವಿ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ವಿಜೃಂಭಣೆಯಿಂದ ಮಾಡುವ ಕುರಿತು ನಗರಸಭೆ ವ್ಯಾಪ್ತಿ, ಗ್ರಾಮ ಪಂಚಾಯತ್, ಧರ್ಮಸ್ಥಳ ಗ್ರಾಮಭಿವೃದ್ಧಿ ಸ್ವಸಹಾಯ ಸಂಘ, ಸ್ಥಳೀಯ ದೇವಸ್ಥಾನಗಳನ್ನು ಸಂಗ್ರಹ ಕೇಂದ್ರವಾಗಿಟ್ಟುಕೊಂಡು ಎಲ್ಲರನ್ನು ಕೂಡಿಕೊಂಡು ಉತ್ತಮ ರೀತಿಯಲ್ಲಿ ಮೆರವಣಿಗೆ ಮಾಡುವ ಬಗ್ಗೆ ಅಭಿಪ್ರಾಯಪಟ್ಟರು.

ಸಭೆಯಲ್ಲಿ ಹೇರಂಜೆ ಕೃಷ್ಣ ಭಟ್, ಶ್ರೀಶ ಆಚಾರ್, ರಾಮಚಂದ್ರ ಉಪಾಧ್ಯ, ರಾಘವೇಂದ್ರ ರಾವ್, ಲಕ್ಷ್ಮೀನಾರಾಯಣ ರಾವ್ ಕೃಷ್ಣಾಪುರ, ವೆಂಕಟರಮಣ ಮುಚ್ಚಿಂತಾಯ, ಧರ್ಮಸ್ಥಳ ಸ್ವಸಹಾಯ ಸಂಸ್ಥೆಯ ರೋಹಿತ್, ಅಯ್ಯಪ್ಪ ಸೇವಾ ಸಮಾಜದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಮೆಂಡನ್, ಗಾಣಿಗ ಸಮಾಜದ ನಗರ ಅಧ್ಯಕ್ಷ ಜಯರಾಮ್, ಭಂಡಾರಿ ಸಮಾಜದ ಬ್ರಹ್ಮಾವರ ಅಧ್ಯಕ್ಷ ಅರುಣ್ ಭಂಡಾರಿ, ಹಿಂದೂ ಜಾಗರಣ ವೇದಿಕೆಯ ಮಹೇಶ್ ಬೈಲೂರ್, ಪ್ರಕಾಶ್ ಅಂದ್ರಾದೆ, ರಂಜಿತ್ ಶೆಟ್ಟಿ, ಹರೀಶ್ ಪೂಜಾರಿ (ರೈಲ್ವೆ ) ಮೊದಲಾದವರು ಉಪಸ್ಥಿತರಿದ್ದರು.

ಪರ್ಯಾಯೋತ್ಸವ ಸಮಿತಿಯ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್ ಸ್ವಾಗತಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ವಿ. ಲಕ್ಷ್ಮೀನಾರಾಯಣ ವಂದಿಸಿದರು.