ಮತ್ತೆ ಬಂದಿದೆ ಉಡುಪಿ ಅಷ್ಟಮಿ.ಕೃಷ್ಣನ ಸಂಭ್ರಮದ ಹಬ್ಬ,ಉಡುಪಿಯವರೆಲ್ಲರೂ ಹರುಷದಿಂದ ಕುಣಿಯುವ ಹಬ್ಬ. ಭಾರತದ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಒಂದು. ಭಗವಾನ್ ಶ್ರೀಕೃಷ್ಣರು ಜನಿಸಿದ ದಿನವೆಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಚಾಂದ್ರಮಾನ ಪ್ರಕಾರ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ಪ್ರಕಾರ ಸಿಂಹಮಾಸದ ರೋಹಿಣಿ ನಕ್ಷತ್ರದಂದು ಜನ್ಮಾಷ್ಟಮಿ ಹಬ್ಬ ಬರುತ್ತದೆ.

ಪುರಾಣಗಳ ಪ್ರಕಾರ ಮಥುರೆಯ ಕಾರಾಗೃಹದಲ್ಲಿ ದೇವಕಿ ಮತ್ತು ವಸುದೇವರಿಗೆ ಎಂಟನೇ ಮಗನಾಗಿ ಕೃಷ್ಣ ಜನಿಸಿದರು. ಕಂಸನು ಅವರ ಮಕ್ಕಳನ್ನು ಕೊಲ್ಲುತ್ತಿದ್ದುದರಿಂದ, ವಸುದೇವನು ಕೃಷ್ಣನನ್ನು ಗುಪ್ತವಾಗಿ ಗೋಕುಲಕ್ಕೆ ಕರೆದೊಯ್ದನು. ಅಲ್ಲಿ ಯಶೋದೆಯ ಮನೆಯಲ್ಲೇ ಕೃಷ್ಣ ಬೆಳೆದನು. ವೃಂದಾವನದಲ್ಲಿ ಬಾಲರಾಮನೊಂದಿಗೆ ಬಾಲ್ಯ ಕಳೆದ ಕೃಷ್ಣನು ಕೊನೆಗೆ ಕಂಸನನ್ನು ಸಂಹರಿಸಿ ಧರ್ಮವನ್ನು ಸ್ಥಾಪಿಸಿದನು.

ಈ ದಿನದಂದು ಮನೆ ಮತ್ತು ದೇವಾಲಯಗಳನ್ನು ಅಲಂಕರಿಸಲಾಗುತ್ತದೆ. ಪುಟ್ಟ ಕೃಷ್ಣನ ಹೆಜ್ಜೆ ಗುರುತುಗಳನ್ನು ರಂಗೋಲಿಯಾಗಿ ಬಿಡುತ್ತಾರೆ. ಕೃಷ್ಣನ ವಿಗ್ರಹಗಳನ್ನು ಅಲಂಕರಿಸಿ ಬಗೆಬಗೆಯ ಸಿಹಿತಿಂಡಿಗಳನ್ನು ಅರ್ಪಿಸುತ್ತಾರೆ. ಕೆಲವರು ಉಪವಾಸವಿದ್ದು ಮಧ್ಯರಾತ್ರಿಯ ಪೂಜೆಯ ನಂತರ ಆಹಾರ ಸ್ವೀಕರಿಸುತ್ತಾರೆ. ಉಡುಪಿಯಂತಹ ಕ್ಷೇತ್ರಗಳಲ್ಲಿ ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ.
ಕೃಷ್ಣ ಜನ್ಮಾಷ್ಟಮಿ, ಭಕ್ತಿ, ಶ್ರದ್ಧೆ ಮತ್ತು ಸಂತೋಷದ ಸಂಕೇತವಾಗಿ ದೇಶದಾದ್ಯಂತ ಭಕ್ತರ ಮನಗಳಲ್ಲಿ ವಿಶೇಷ ಸ್ಥಾನ ಪಡೆದಿದೆ.ಉಡುಪಿಯಲ್ಲಿಂದು ಅಷ್ಟಮಿಯ ವೈಭವ ಕಳೆಗಟ್ಟುತ್ತಿದೆ.ಬನ್ನಿ ಉಡುಪಿಯ ಅಷ್ಟಮಿಯ ಗೌಜಿ ಗಮ್ಮತ್ತಲ್ಲಿ ಸಂಭ್ರಮಿಸೋಣ..




















