ಉಡುಪಿ: ಎ. 4 ರಂದು ಕಲಾಸೌರಭ ಕಾರ್ಯಕ್ರಮ; ಆಟಿಸಂ ಸೊಸೈಟಿ ಉಡುಪಿ ಆಯೋಜನೆ.

ಉಡುಪಿ: ಕಳೆದ ನಾಲ್ಕು ವರ್ಷಗಳಿಂದ ಆಟಿಸಂ ಮಕ್ಕಳು ಮತ್ತು ಪೋಷಕರಿಗಾಗಿ “ಕಲಾಸೌರಭ” ಕಾರ್ಯಕ್ರಮವನ್ನು ಆಟಿಸಂ ಸೊಸೈಟಿ ಉಡುಪಿ ಮತ್ತು ಇನ್ನಿತರ ಸಮಾನ ಮನಸ್ಕ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಿಂದ ಆಯೋಜಿಸುತ್ತಾ ಬಂದಿದ್ದೇವೆ.
ಈ ವರ್ಷ “ಕಲಾಸೌರಭ” ಕಾರ್ಯಕ್ರಮವು “ವಿಶಿಷ್ಟತೆಗಳನ್ನು ಸಂಭ್ರಮಿಸಿ” ಎಂಬ ವಿಷಯವನ್ನು ಆಧರಿಸಿ ಎಪ್ರಿಲ್ 4ರ ಶನಿವಾರದಂದು ಬನ್ನಂಜೆಯ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4.30ರ ವರೆಗೆ ನಡೆಯಲಿದೆ ಎಂದು ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು , ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳು ಮತ್ತು ಪೋಷಕರನ್ನು ಪ್ರೋತ್ಸಾಹಿಸಲು ವೇದಿಕೆಯನ್ನು ಕಲ್ಪಿಸಿಕೊಡಲಾಗುವುದು. ಈ ಮೂಲಕ ಪೋಷಕರು ಸಾಮಾಜಿಕ ಕಳಂಕವನ್ನು ತೊಡೆದು ತಮ್ಮ ವಿಶೇಷ ಮಗುವಿನೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಕಲಾಸೌರಭ’ದ ಉದ್ಘಾಟನಾ ಸಮಾರಂಭ ಏಪ್ರಿಲ್ 4 ರ ಬೆಳಿಗ್ಗೆ 9.45 ಗಂಟೆಗೆ ನಡೆಯಲಿದೆ. ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಕಾರ್ಯನಿರ್ವಾಹಕ ಅಧಿಕಾರಿ ಸವಿತಾ ಸುಲುಗೋಡು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಡಾ.ವಿರೂಪಾಕ್ಷ ದೇವರಮನೆ , ಸೌಜನ್ಯಾ ಶೆಟ್ಟಿ , ವಿಠಲ ಭಕ್ತ , ಕೀರ್ತೇಶ್ ಉಪಸ್ಥಿತರಿದ್ದರು.