ಕ್ವಾರಂಟೈನ್ ನಿಯಮದ ಪಾಲನೆ ಪರಿಶೀಲನೆಗೆ ಕ್ರಮ: ಮಹೇಶ್ವರ ರಾವ್

ಏಪ್ರಿಲ್ 12: ಜಿಲ್ಲೆಯಲ್ಲಿ ಕೋರೋನಾ ಸಂಬಂದಿಸಿದಂತೆ, ಹೋಂ ಕ್ವಾರಂಟೈನ್ ನಲ್ಲಿರುವವರು ಮತ್ತು ಆಸ್ಪತ್ರೆ ಕ್ವಾರಂಟೈನ್‍ನಲ್ಲಿರುವವರು, ಸರಕಾರದ ಮಾರ್ಗಸೂಚಿಯನ್ವಯ ನಿಯಮಗಳನ್ನು ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾ  ಉಸ್ತುವಾರಿ ಕಾರ್ಯದರ್ಶಿ ಮಹೇಶ್ವರ ರಾವ್ ಸೂಚಿಸಿದ್ದಾರೆ.

ಅವರು ಭಾನುವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ,ಜಿಲ್ಲೆಯಲ್ಲಿನ  ಕೊರೋನಾ ನಿಯಂತ್ರಣ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕ್ವಾರಂಟೈನ್ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸುತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲನೆ ನಡೆಸಿ, ಬಗ್ಗೆ ಜಿಲ್ಲೆಯ ಗಡಿ ಪ್ರದೇಶಗಳನ್ನು ಬಿಗಿಗೊಳಿಸುವಂತೆ ಸೂಚಿಸಿದ ಉಸ್ತುವಾರಿ ಕಾರ್ಯದರ್ಶಿಗಳು, ಸರಕು ಸಾಗಣೆ ಮತ್ತು ತುರ್ತು ವೈದ್ಯಕೀಯ ನೆರವು  ಅಗತ್ಯವಿರುವವರಿಗೆ ಮಾತ್ರ ಜಿಲ್ಲೆಯೊಳಗೆ ಪ್ರವೇಶಕ್ಕೆ ಅನುಮತಿ ನೀಡಿ ಎಂದು ಸೂಚಿಸಿದರು.

ಜಿಲ್ಲೆಯ ಕೋರೊನಾ ಸಂಶಯದ ಮಾದರಿಗಳನ್ನು ಪ್ರಸ್ತುತ ಮಂಗಳೂರಿನ ಪ್ರಯೋಗಾಲಯಕ್ಕೆ  ಕಳುಹಿಸಲಾಗುತ್ತಿದ್ದು, ಇಲ್ಲಿಂದ ವರದಿ ಬರಲು ತಡವಾಗುತ್ತಿದೆ, ಈ ಹಿಂದಿನಂತೆ ಹಾಸನದ ಪ್ರಯೋಗಾಲಯಕ್ಕೆ  ಕಳುಹಿಸಲು ಅಗತ್ಯ ಅನುಮತಿ ನೀಡುವಂತೆ  ಹಾಗೂ ಕೆಎಂಸಿ ಯಲ್ಲಿ ಪ್ರಯೋಗಾಲಯಕ್ಕೆ ಅನುಮತಿ ದೊರಕಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಕೋರಿದರು. ಈ  ಕುರಿತು ಕ್ರಮ ಕೈಗೊಳ್ಳುವುದಾಗಿ ಕಾರ್ಯದರ್ಶಿ ತಿಳಿಸಿದರು.

ಕಂಟೈನ್‍ಮೆಂಟ್ ಯೋಜನೆ ಕುರಿತು ಎಲ್ಲಾ ಸಿಬ್ಬಂದಿಗಳಿಗೆ ತರಬೇತಿ ನೀಡುವಂತೆ ಹಾಗೂ ಅಗತ್ಯವಿರುವ ಸಿಬ್ಬಂದಿ ಹಾಗೂ ಇತರೆ ವ್ಯವಸ್ಥೆಯನ್ನು ಸಿದ್ದಪಡಿಸಿಕೊಂಡಿರುವಂತೆ ತಿಳಿಸಿದ ಕಾರ್ಯದರ್ಶಿಗಳು , ಯಾವುದೇ ತುರ್ತು ಸಮಸ್ಯೆಗಳಿದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ  ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹಲೋತ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಎಲ್ಲಾ ತಹಸೀಲ್ದಾರ್ ಗಳು ಮತ್ತು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.