ಉಡುಪಿ: ಜಾತಿ, ಧರ್ಮವನ್ನು ಸಮಾಜವೆಂದು ಪರಿಗಣಿಸಲು ಸಾಧ್ಯವಿಲ್ಲ. ಸಮಾಜದ ಪರಿಕಲ್ಪನೆಯಲ್ಲಿ ಎಲ್ಲರ ಒಳಗೊಳ್ಳುವಿಕೆಯೇ ಬಹಳ ಮುಖ್ಯ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಹೇಳಿದರು.
ಉಡುಪಿ ಹೋಟೆಲ್ ಸ್ವದೇಶ್ ಹೆರಿಟೇಜ್ ಸಭಾಂಗಣದಲ್ಲಿ ಭಾನುವಾರ ನಡೆದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ನ ‘ವಿಂಶತಿ ಸಂಭ್ರಮ–2019’ ಕಾರ್ಯಕ್ರಮದಲ್ಲಿ ತಾರಾನಾಥ ಮೇಸ್ತ ಶಿರೂರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ಕುರಿತು ಬರೆದ ‘ಆಪತ್ಬಾಂಧವ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಇಂದು ಧರ್ಮ ಹಾಗೂ ಸಮಾಜ ಎಂಬ ಪದದ ದುರುಪಯೋಗ ಆಗುತ್ತಿದೆ. ಜಾತಿ, ಧರ್ಮವನ್ನು ಸಮಾಜದೊಂದಿಗೆ ಸೇರಿಸಿ ದುರ್ಬಳಕೆ ಮಾಡಲಾಗುತ್ತಿದೆ. ಇದು ಬಹಳ ದೊಡ್ಡ ತಪ್ಪು. ಎಲ್ಲ ಜಾತಿ, ಸಮುದಾಯಗಳು ಸೇರಿರುವ ಧರ್ಮವೇ ಸಮಾಜ ಎಂದರು.
ಬದ್ಧತೆ ಉಳ್ಳುವರು ತೆಗೆದುಕೊಳ್ಳುವ ವಿಚಾರ, ಕೈಗೊಳ್ಳುವ ಕಾರ್ಯ ಜೀವಂತವಾಗಿರುತ್ತದೆ.
ಸಮಾಜ ಸೇವೆ ಮಾಡಲು ಮುಂದೆ ಬರುವ ಕೆಲವರು ಸಮಾಜದ ಸಮಸ್ಯೆಗಳನ್ನು ಎದುರಿಸಲು ಆಗದೆ ಅರ್ಧದಿಂದಲೇ ಪಾಲಾಯನ ಮಾಡುತ್ತಾರೆ. ಆದರೆ ನಿತ್ಯಾನಂದ ಒಳಕಾಡು ಅವರು ಇದರಿಂದ ಹೊರತಾದವರು. ಸಮಾಜವನ್ನು ನಿಜಾರ್ಥದಲ್ಲಿ ಅರಿತುಕೊಂಡು ಕೆಲಸ ಮಾಡುವ ವ್ಯಕ್ತಿಗಳ ಪೈಕಿ ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಅವರು ಮಾಡಿರುವ ಸಮಾಜ ಸೇವೆ ಯಾವುದೇ ಫ್ಯಾಸನ್ಗಾಗಿ ಅಲ್ಲ. ಸಮಾಜಕ್ಕೆ ಯಾವುದೇ ಆಪತ್ತು ಬಂದರೂ ಅದನ್ನು ಎದುರಿಸುವ
ಸಾಮರ್ಥ್ಯ ಅವರಲ್ಲಿದೆ ಎಂದು ಅಭಿಪ್ರಾಯಪಟ್ಟರು.
ಸಾಲುಮರದ ತಿಮ್ಮಕ್ಕರಂತೆ ಸಾಧನೆ ಮಾಡಿರುವ ನಿತ್ಯಾನಂದ ಒಳಕಾಡು ಅವರ ಜೀವನ ಚರಿತ್ರೆ ಪಠ್ಯಪುಸ್ತಕಗಳಲ್ಲಿ ದಾಖಲಾಗಬೇಕು. ಕೇವಲ ಹಣದಿಂದ ಸಮಾಜದ ಋಣ ತೀರಿಸಲು ಸಾಧ್ಯವಿಲ್ಲ. ಕಠಿಣ ಪರಿಶ್ರಮ ಪಟ್ಟಾಗ ಮಾತ್ರ ಸಮಾಜದ ಋಣ ತೀರಿಸಲು ಸಾಧ್ಯ ಎಂದರು.
ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಶ್ರೀಮಂತರು ಹಾಗೂ ಬಡವರ ನಡುವೆ ದೊಡ್ಡ ಕಂದಕ ನಿರ್ಮಾಣ ಆಗಿದೆ. ಇದನ್ನು ಹೋಗಲಾಡಿಸಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಉಡುಪಿ ಜಿಲ್ಲಾ ಬಿಲ್ಡರ್ಸ್ ಅಸೋಸಿಯೇಶನ್ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್ ಮಾತನಾಡಿದರು.
ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಕೃತಿ ಪರಿಚಯ ಮಾಡಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ನ ಅಧ್ಯಕ್ಷ ಎಂ. ನಾಗೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸನ್ಮಾರ್ಗ ಪತ್ರಿಕೆಯ ಸಂಪಾದಕ ಎ.ಕೆ. ಕುಕ್ಕಿಲ, ಲೇಖಕ ತಾರಾನಾಥ ಮೇಸ್ತ ಶಿರೂರು ಉಪಸ್ಥಿತರಿದ್ದರು.
ನಾಗರಿಕ ಸಮಿತಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.