ಉಡುಪಿ: ಕೇಂದ್ರ ಮತ್ತು ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ್ ಜೀವನ್ ಮಿಷನ್ಯೋಜನೆಯಡಿ ನಿಗದಿಯಾಗಿರುವ ಕುಡಿಯುವ ನೀರಿನ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಪ್ರತಿ ಮನೆಗೂನೀರಿನ ಸಂಪರ್ಕ ಒದಗಿಸಿ ಶೇ 100 ರಷ್ಟು ಪ್ರಗತಿ ದಾಖಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅಧಿಕಾರಿಗಳಿಗೆ ಹೇಳಿದರು.
ಅವರು ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಕಚೇರಿಯಲ್ಲ್ಲಿ ನಡೆದ ಕುಡಿಯುವ ನೀರಿನ ಗುಣಮಟ್ಟ ಮೇಲ್ವಿಚಾರಣೆಯ ಜಿಲ್ಲಾಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಕಳ ಮತ್ತು ಕುಂದಾಪುರ ವ್ಯಾಪ್ತಿಯಲ್ಲಿ ಮೀಸಲು ಮತ್ತು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಕೆಮತ್ತು ಓವರ್ ಹೆಡ್ ಟ್ಯಾಂಕ್ ಕಾಮಗಾರಿಗಳಿಗೆ ಅರಣ್ಯ ಇಲಾಖೆಯ ಅನುಮತಿಯ ಅಗತ್ಯವಿದ್ದು, ಅರಣ್ಯಾಧಿಕಾರಿಗಳಿಂದ ಪ್ರಮಾಣ ಪತ್ರಪಡೆದು ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ತಿಗೊಳಿಸಬೇಕು. ಜಿಲ್ಲೆಯಲ್ಲಿ ಬಾಕಿ ಉಳಿದಿರುವ ನಳ್ಳಿ ನೀರಿನ ಸಂಪರ್ಕಗಳ ಕಾಮಗಾರಿಗಳನ್ನುಶೀಘ್ರವಾಗಿ ಮುಗಿಸಿ ಕಾಮಗಾರಿ ಮುಗಿದಿರುವ ಬಗ್ಗೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಏಕ ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ೫೨೫ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 487 ಕಾಮಗಾರಿಗಳು ಪೂರ್ಣವಾಗಿದ್ದು 38 ಕಾಮಗಾರಿಗಳು ಪ್ರಗತಿಯಲ್ಲಿದ್ದು ಶೇ.93 ರಷ್ಟು ಗುರಿ ಸಾಧಿಸಲಾಗಿದೆ.
ನಳ್ಳಿ ನೀರಿನ ಸಂಪರ್ಕದಲ್ಲಿ ಒಟ್ಟು 180868 ರಲ್ಲಿ 149416 ಸಂಪರ್ಕ ನೀಡಲಾಗಿದ್ದು ಶೇ. 83 ರಷ್ಟು ಗುರಿ ಸಾಧಿಸಲಾಗಿದ್ದು ಒಟ್ಟು 540.76 ವೆಚ್ಚದ ಕಾಮಗಾರಿಗಳು ಪೂರ್ಣವಾಗಿವೆ.ಜಿಲ್ಲೆಯ 7 ತಾಲೂಕುಗಳ 155 ಗ್ರಾಮದ 246 ಹಳ್ಳಿಗಳ 3402 ಆವಾಸ ಸ್ಥಾನಗಳ 3,47,190 ಮನೆಗಳಲ್ಲಿ 2,15,738, ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದ್ದು 31,452 ಮನೆಗ¼ ನೀರಿನ ಸಂಪರ್ಕ ಬಾಕಿ ಇದೆ ಎಂದರು.
ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಬೈಂದೂರು ತಾಲೂಕಿನ 788 ಗ್ರಾಮೀಣ ಜನವಸತಿ ಮತ್ತು ಬೈಂದೂರು ಪಟ್ಟಣವ್ಯಾಪ್ತಿಯಲ್ಲಿ 305.12 ಕೋಟಿ ವೆಚ್ಚದ ಕಾಮಗಾರಿ ಹಾಗೂ ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದ ಕೆಪಿಸಿ ಡ್ಯಾಂ ಬಳಿಯ ವಾರಾಹಿನದಿಯಿಂದ ಕಾರ್ಕಳ, ಹೆಬ್ರಿ ಮತ್ತು ಕಾಪು ತಾಲೂಕಿನ 69 ಬೃಹತ್ ನೀರು ಸರಬರಾಜು ಯೋಜನೆಯಡಿ 528.42 ಕೋಟಿ ವೆಚ್ಚದಕಾಮಗಾರಿಗಳು ಪ್ರಗತಿಯಲ್ಲಿದ್ದು ಎಲ್ಲ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ.ಉದಯ್ ಕುಮಾರ್ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯವಿಭಾಗದ ಅಧಿಕಾರಿಗಳು ಹಾಜರಿದ್ದರು.

















