ಉಡುಪಿ: ಖತರ್ನಾಕ್ ಅಂತರ್ ಜಿಲ್ಲಾ ಸರಗಳ್ಳನ ಬಂಧನ; ಲಕ್ಷಾಂತರ ರೂ.ಗಳ ಸೊತ್ತು ವಶ

ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಕ್ರಿಯನಾಗಿದ್ದ ಖತರ್ನಾಕ್ ಅಂತರ್ ಜಿಲ್ಲಾ ಸರಗಳ್ಳನ್ನೊಬ್ಬನನ್ನು ಉಡುಪಿ ಪೊಲೀಸರು ಬಂಧಿಸಿದ್ದು, ಆತನಿಂದ 172.02 ಗ್ರಾಂ ಚಿನ್ನ, 3 ದ್ವಿಚಕ್ರ ವಾಹನ ಸೇರಿ ಒಟ್ಟು ₹ 9,38,200 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಗಳೂರು ಮೂಲದ ಚಂದ್ರಶೇಖರ್ (25) ಎಂಬಾತ ಬಂಧಿತ ಆರೋಪಿ. ಈತನನ್ನು ಉಡುಪಿಯ ಕುಕ್ಕಿಕಟ್ಟೆ ಜಂಕ್ಷನ್ ಬಳಿ ಪೊಲೀಸರು ಬಂಧಿಸಿದ್ದಾರೆ.

ಈತ ಸರಗಳ್ಳತನ ಮಾಡಲು ಸೆಕೆಂಡ್ ಹ್ಯಾಂಡ್ ಬಜಾರ್ ನಲ್ಲಿ ಟೆಸ್ಟ್ ಡ್ರೈವ್ ಗೆ ಹೋಗಿರುತ್ತೇನೆಂದು ಬೈಕ್ ಎಗರಿಸುತ್ತಿದ್ದನು. ಬಳಿಕ‌ ಅದೇ ಬೈಕ್ ನಲ್ಲಿ ಸರಗಳ್ಳತನ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಈತ ಮಂಗಳೂರಿನ ಕಂಕನಾಡಿಯ ಗೋರಿಗುಡ್ಡೆಯ ಸೆಕೆಂಡ್ ಹ್ಯಾಂಡ್ ಬಜಾರ್ ವೊಂದರಲ್ಲಿ ಬೈಕ್ ಖರೀದಿಸುವ ಸೋಗಿನಲ್ಲಿ ಹೋಗಿ ಅಲ್ಲಿ ಟೆಸ್ಟ್ ಡ್ರೈವ್ ಗೆ ಹೋಗುವುದಾಗಿ ಹೇಳಿ ಬೈಕ್ ಜತೆ ಪರಾರಿಯಾಗಿದ್ದನು.

ಅದೇ ಬೈಕ್ ಮೂಲಕ ಮಂಗಳೂರು, ಉಡುಪಿ‌ಯ ಸೈಂಟ್ ಸಿಸಿಲಿ ಶಾಲೆ, ಕೆಎಸ್ಆರ್ ಟಿಸಿ ಬಸ್ ನಿಲ್ದಾಣ, ಇಂದ್ರಾಳಿ ಸಹಿತ ವಿವಿಧೆಡೆ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದನು.

ಮಂಗಳೂರು ನಗರದ ಬರ್ಕೆ, ಮಣಿಪಾಲ ಠಾಣೆ ಹಾಗೂ ಕಂಕನಾಡಿ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ಬೈಕ್‌ನ್ನು ಕದ್ದಿದ್ದನು.‌ ಬಳಿಕ ಅದೇ ಬೈಕ್ ನಿಂದ ಸರಗಳ್ಳತನ ಮಾಡುತ್ತಿದ್ದನು.
ಆರೋಪಿಯು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ 4 ಸರಗಳ್ಳತನ, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ 2 ಸರಗಳ್ಳತನ, ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ 1 ಸರಗಳ್ಳತನ, ಮಂಗಳೂರು ನಗರದ ಕದ್ರಿ, ಮೂಲ್ಕಿಯಲ್ಲಿ ತಲಾ ಒಂದು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಆರೋಪಿಯ ಪತ್ತೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಾರಿ ಎನ್ ವಿಷ್ಣುವರ್ಧನ್ , ಹಾಗೂ  ಹೆಚ್ಚುವರಿ ಪೊಲೀಸ್ ಅಧೀಕ್ಷಕ  ಕುಮಾರಚಂದ್ರ ರವರ ಮಾರ್ಗದರ್ಶನದಲ್ಲಿ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ  ಟಿ.ಆರ್ ಜೈಶಂಕರ್ ಹಾಗೂ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ  ಭರತ್ ರೆಡ್ಡಿ ರವರ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಈ ಕಾರ್ಯಾಚರಣೆಯಲ್ಲಿ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ  ಟಿ.ಅರ್ ಜೈಶಂಕರ್ ಹಾಗೂ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಭರತ್ ರೆಡ್ಡಿ, ಉಡುಪಿ ನಗರ ಸಿ.ಪಿ.ಐ ಮಂಜುನಾಥ ಹಾಗೂ ಸಿಬ್ಬಂದಿಯವರು, ಡಿಸಿಐಬಿ ಘಟಕದ ಪಿ.ಐ ಮಂಜಪ್ಪ ಡಿ.ಆರ್ ಹಾಗೂ ಸಿಬ್ಬಂದಿಯವರು, ಮಣಿಪಾಲ ಠಾಣಾ ಪಿ.ಐ  ಮಂಜುನಾಥ ಹಾಗೂ ಸಿಬ್ಬಂದಿಯವರು, ಕಾವು ಸಿಪಿಐ  ಪ್ರಕಾಶ್ ಮತ್ತು ಸಿಬ್ಬಂದಿ, ಉಡುಪಿ ನಗರ ಠಾಣಾ ಪಿಎಸ್‌ಐ  ಸಕ್ತಿವೇಲು, ಅಪರಾಧ ವಿಭಾಗದ ಪಿ ಎಸ್‌ಐ  ವಾಸಪ್ಪ ನಾಯ್ಕ ಹಾಗೂ ಸಿಬ್ಬಂದಿ, ಮಣಿಪಾಲ ಪಿಎಸ್ಐ ರಾಜ್ ಶೇಖರ್ ಹಾಗೂ ಸಿಬ್ಬಂದಿ, ಮಲ್ಪೆ ಪಿಎಸ್ ಐ ತಿಮ್ಮೇಶ್ ಬಿ.ಎನ್ ಹಾಗೂ ಸಿಬ್ಬಂದಿ, ಕಾಪು ಪಿಎಸ್‌ಐ ರಾಘವೇಂದ್ರ ಮತ್ತು ಸಿಬ್ಬಂದಿ, ಪಡುಬಿದ್ರಿ ಠಾಣಾ ಸಿಬ್ಬಂದಿ, ಉಡುಪಿ ಸಂಚಾರ ಠಾಣಾ ಪಿಎಸ್‌ಐ ಅಬ್ದುಲ್ ಖಾದರ್ ಮತ್ತು ಶೇಖರ್, ತಾಂತ್ರಿಕ ವಿಭಾಗ ಸಿಬ್ಬಂದಿ ಪಾಲ್ಗೊಂಡಿದ್ದರು.