ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಉಡುಪಿಯ ಹಾಲಿ ಶಾಸಕ ರಘುಪತಿ ಭಟ್, ಬ್ರಾಹ್ಮಣ ಎಂಬ ಕಾರಣಕ್ಕೆ ಪಕ್ಷ ಈವರೆಗೆ ನನಗೆ ಟಿಕೆಟ್ ಕೊಟ್ಟದಲ್ಲ. ನಾನು ಯಾವುದೇ ಜಾತಿಯ ಕ್ಯಾಂಡಿಡೇಟ್ ಅಲ್ಲ.
ನಾನು ಒಳ್ಳೆಯ ಕಾರ್ಯಕರ್ತ, ಕೆಲಸಗಾರ ಎಂಬ ಕಾರಣಕ್ಕೆ ಪಕ್ಷ ಈ ಹಿಂದೆ ಸೀಟ್ ಕೊಟ್ಟಿದೆ. ಒಂದು ವೇಳೆ ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿದ್ದರೆ, ಮುಂದಿನ ಅಭಿಪ್ರಾಯವನ್ನು ತಿಳಿಸುತ್ತೇನೆ ಎಂದರು.
ಕುಂದಾಪುರದಲ್ಲಿ ಯಾವುದೇ ಮಾನದಂಡ ಬಂದರೂ ನನಗೆ ಎಫೆಕ್ಟ್ ಆಗಲ್ಲ. ನಾನು ಕುಂದಾಪುರ ಕ್ಷೇತ್ರದ ಟಿಕೆಟ್ ಅಪೇಕ್ಷಿತನಲ್ಲ. ಉಡುಪಿ ಕ್ಷೇತ್ರದ ಆಕಾಂಕ್ಷಿ. ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ. ಅಲ್ಲಿಯ ಅಭ್ಯರ್ಥಿಯ ಬಗ್ಗೆ ಪಕ್ಷ ತೀರ್ಮಾನಿಸಲಿದೆ. ಕುಂದಾಪುರದ ಚಿತ್ರಣಕ್ಕೂ ಉಡುಪಿಗೂ ತಾಳೆ ಹಾಕಲು ಆಗಲ್ಲ ಎಂದರು.
ಉಡುಪಿಯಲ್ಲಿ ಬಿಜೆಪಿಗೆ ಗೆಲ್ಲುವ ಅವಕಾಶ ಇದೆ. ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಖಾಲಿ ಮಾಡಿದ್ದೇವೆ. ಹಲವು ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸದ ಮೇಲೆ ಪಕ್ಷಕ್ಕೆ ಕರೆತಂದಿದ್ದೇನೆ. ಕೆಲವೊಮ್ಮೆ ಹಣೆಬರಹದ ಮೇಲೆ ನಿರ್ಧಾರ ಆಗುತ್ತದೆ. 2013ರಲ್ಲಿ ನನಗೆ ಕೈ ತಪ್ಪುವುದಿಲ್ಲ ಎಂಬ ವಿಶ್ವಾಸವಿತ್ತು. ಆದರೆ ನನ್ನಿಂದ ಆದ ಅವಘಡದಿಂದ ಟಿಕೆಟ್ ಕೈತಪ್ಪಿತ್ತು. ಹಾಗಾಗಿ ಹಣೆ ಬರಹದ ಮೇಲೆ ಎಲ್ಲ ನಿರ್ಧಾರ ಆಗುತ್ತದೆ. ಅದಕ್ಕೆ ನಾನು ತಲೆಬಿಸಿ ಮಾಡಿಕೊಳ್ಳಲ್ಲ ಎಂದು ಹೇಳಿದರು.