ಉಡುಪಿ: ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿದ್ದ ಮುಳ್ಳುಹಂದಿಯೊಂದನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ರಕ್ಷಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ನಗರದ ಚಿತ್ಪಾಡಿಯ ಶ್ರೀನಿವಾಸನಗರದಲ್ಲಿ ನಡೆದಿದೆ.
ಗಾಯಗೊಂಡ ಸ್ಥಿತಿಯಲ್ಲಿ ಮುಳ್ಳುಹಂದಿ ಇರುವುದನ್ನು ಸ್ಥಳೀಯ ನಿವಾಸಿ ಧನಂಜಯ ದೇವಾಡಿಗ ಗಮನಿಸಿ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿದ ಅವರು ಚಾಣಕ್ಷತನದಿಂದ ಗೋಣಿ ಚೀಲದ ಸಹಾಯದಿಂದ ಕಾರ್ಯಾಚರಣೆ ನಡೆಸಿ ಮುಳ್ಳುಹಂದಿಯನ್ನು ಸುರಕ್ಷಿತವಾಗಿ ಹಿಡಿದು ರಕ್ಷಸಿದರು.
ಮುಳ್ಳುಹಂದಿ ಅಪಾಯದ ಸಂದರ್ಭಗಳಲ್ಲಿ ತನ್ನ ಮುಳ್ಳುಗಳನ್ನು ಎರಗಿಸಿ ಪ್ರತಿದಾಳಿ ನಡೆಸುವ ಸಾಧ್ಯತೆ ಇರುವುದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಿನದ್ದಾಗಿತ್ತು. ಆದರೂ ಯಾವುದೇ ಹಾನಿಯಾಗದಂತೆ ಅದನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಲಾಯಿತು.
ಅರಣ್ಯ ಇಲಾಖೆಯ ಫಾರೆಸ್ಟರ್ ಶಿವಾನಂದ ಮುಳ್ಳುಹಂದಿಯನ್ನು ಸ್ವೀಕರಿಸಿದ್ದು, ಅಗತ್ಯ ಚಿಕಿತ್ಸೆ ನೀಡಿದ ಬಳಿಕ ಅದು ಸಂಪೂರ್ಣ ಗುಣಮುಖವಾದ ನಂತರ ಕಾಡಿಗೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ, ಮುಳ್ಳುಹಂದಿಯೊಂದಿಗೆ ನಡೆದ ಕಾದಾಟದಲ್ಲಿ ಅದರ ಮುಳ್ಳುಗಳು ಮೈತುಂಬ ಚುಚ್ಚಿಕೊಂಡಿದ್ದ ನಾಯಿ ನಾಪತ್ತೆಯಾಗಿದ್ದು, ಅದರ ಸ್ಥಿತಿ ಆತಂಕಕಾರಿಯಾಗಿದೆ. ಗಾಯಗೊಂಡಿರುವ ನಾಯಿಗೆ ತುರ್ತು ಚಿಕಿತ್ಸೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ಅದರ ಹುಡುಕಾಟ ಮುಂದುವರಿದಿದೆ ಎಂದು ತಿಳಿದುಬಂದಿದೆ.

















