ಉಡುಪಿ: ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಜಿಲ್ಲೆಯಾದ್ಯಂತ ನಾಟಕ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಜಿ. ಜಗದೀಶ್ ಅನುಮತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನಾಟಕ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ಕೋರಿ ಜಿಲ್ಲೆಯ ವೃತ್ತಿಪರ ನಾಟಕ ತಂಡಗಳ ಪರವಾಗಿ ಸಮಾಜರತ್ನ ಲೀಲಾಧರ ಶೆಟ್ಟಿ ಕರಂದಾಡಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಲಾಯಿತು. ಮನವಿಗೆ ಸ್ಪಂದಿಸಿದ ಡಿಸಿ ಅವರು ನಾಟಕ ಪ್ರದರ್ಶನಕ್ಕೆ ಅನುಮತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 15ರಿಂದ 20 ವೃತ್ತಿಪರ ನಾಟಕ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ನೂರಾರು ಕಲಾವಿದರು ಹಾಗೂ ತಂತ್ರಜ್ಞರು ಆರ್ಥಿಕವಾಗಿ ನಾಟಕ ಪ್ರದರ್ಶನಗಳನ್ನೇ ಅವಲಂಬಿಸಿದ್ದಾರೆ. ಕೊರೊನಾ ಸಂಕಷ್ಟದಿಂದಾಗಿ ಕಳೆದ ಹತ್ತು ತಿಂಗಳಿನಿಂದ ಒಂದೇ ಒಂದು ನಾಟಕ ಪ್ರದರ್ಶನವಾಗಿಲ್ಲ. ಇದರಿಂದ ನೂರಾರು ಕಲಾವಿದರ, ತಂತ್ರಜ್ಞರ ಆರ್ಥಿಕ ಪರಿಸ್ಥಿತಿ ಚಿಂತಾಜನಕ ಸ್ಥಿತಿಗೆ ತಲುಪಿದೆ. ಇವರನ್ನು ಅವಲಂಬಿಸಿರುವ ಕುಟುಂಬಗಳಿಗೂ ದಿಕ್ಕು ತೋಚದಂತಾಗಿದೆ. ಹಾಗಾಗಿ ಕೂಡಲೇ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಲೀಲಾಧರ ಶೆಟ್ಟಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಚೈತನ್ಯ ಕಲಾವಿದರು ಬೈಲೂರು ತಂಡದ ಪ್ರಸನ್ನ ಶೆಟ್ಟಿ ಬೈಲೂರು, ಕಾಪು
ರಂರತರಂಗ ತಂಡದ ಶರತ್ ಉಚ್ಚಿಲ ಹಾಗೂ ಮರ್ವಿನ್ ಶಿರ್ವ, ತೆಲಿಕೆದ ತೆನಾಲಿ ಕಾರ್ಕಳ
ತಂಡದ ಸುನಿಲ್ ನೆಲ್ಲಿಗುಡ್ಡೆ, ಅಭಿನಯ ಕಲಾವಿದರು ಉಡುಪಿ ತಂಡದ ಉಮೇಶ್ ಅಲೆವೂರು,
ಕಾರ್ತಿಕ್ ಕಡೇಕಾರ್ ಹಾಗೂ ವಿಕ್ರಮ್ ಮಂಚಿ, ನವಸುಮ ಕೊಡವೂರು ತಂಡದ
ಬಾಲಕೃಷ್ಣ ಕೊಡವೂರು, ಕಲಾಚಾವಡಿ ಉಡುಪಿ ತಂಡದ ಪ್ರಭಾಕರ್ ಆಚಾರ್ಯ ಮೂಡುಬೆಳ್ಳೆ, ಸಿಂಧೂರ ಕಲಾವಿದರು ಕಾರ್ಕಳ ತಂಡದ ಹಮೀದ್ ಮಿಯಾರು ಹಾಗೂ ಸಂದೀಪ್ ಬಾರಾಡಿ,
ನಮ್ಮ ಕಲಾವಿದರು ಪಿತ್ರೋಡಿ ತಂಡದ ನವೀನ್ ಸಾಲ್ಯಾನ್ ಪಿತ್ರೋಡಿ , ಸಾಕ್ಷಿ ಕಲಾವಿದರು
ಬೆಳಪು ತಂಡದ ಶುಭಕರ್ ಬೆಳಪು ಮೊದಲಾದವರು ಹಾಜರಿದ್ದರು.