ಮಂಗಳೂರು: ಗರ್ಭಿಣಿಯರಿಗೆ ಸೀಮಂತ ಮಾಡಿ ಗಂಡನ ಮನೆಯಿಂದ ತಾಯಿ ಮನೆಗೆ ಕಳುಹಿಸಿ ಕೊಡುವುದು ಸರ್ವೇ ಸಾಮಾನ್ಯ. ಆದರೆ ಪೊಲೀಸ್ ಠಾಣೆಯಲ್ಲಿ ಗರ್ಭಿಣಿ ಸಿಬ್ಬಂದಿಗೆ ತಮ್ಮ ಸಹೋದ್ಯೋಗಿಗಳು ಸೀಮಂತ ಮಾಡಿದ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಪುತ್ತೂರು ನಿವಾಸಿ ತುಂಬು ಗರ್ಭಿಣಿ ಮಲ್ಲಿಕಾ ಅವರನ್ನು ವಿಟ್ಲ ಠಾಣಾ ಎಸ್ ಐ ಮತ್ತು ಠಾಣಾ ಸಿಬ್ಬಂದಿಗಳು ಜತೆ ಸೇರಿ ಠಾಣೆಯಲ್ಲಿ ಸೀಮಂತ ಕಾರ್ಯಕ್ರಮ ಮಾಡಿದರು.
ಮಹಿಳಾ ಸಿಬ್ಬಂದಿ ಸೀಮಂತದ ವೇಳೆ ಮಾಡುವ ಕ್ರಮಗಳನ್ನು ಮಾಡಿದರು. ಗಂಡನ ಮನೆಯಲ್ಲಿ ತಿಂಗಳ ಹಿಂದೆ ಮಲ್ಲಿಕಾರವರ ಸೀಮಂತ ಕಾರ್ಯಕ್ರಮ ನಡೆದಿತ್ತು. ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಗಳ ಮಾನವೀಯ ಮೌಲ್ಯದ ಈ ಆತಿಥ್ಯ ಜನತೆಯ ಶ್ಲಾಘನೆಗೆ ಕಾರಣವಾಗಿದೆ.