ಉಡುಪಿ: ಗಾಂಧಿ ಆಸ್ಪತ್ರೆಯ ಜನೋಪಯೋಗಿ ಕಾರ್ಯ ಶ್ಲಾಘನೀಯ- ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.

ಉಡುಪಿ: ಕಳೆದ‌ ಮೂವತ್ತೊಂದು ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ನಗರದ ಸಿಟಿಬಸ್‌ ನಿಲ್ದಾಣ ಬಳಿಯ ಗಾಂಧಿ ಆಸ್ಪತ್ರೆಯ ಸಾಮಾಜಿಕ ಕಾರ್ಯ ಶ್ಲಾಘನೀಯ. ಸುಮಾರು 25 ವರ್ಷಗಳಿಂದ ರಕ್ತದಾನ ಶಿಬಿರ ಆಯೋಜನೆಯ ಮೂಲಕ ಸಾಕಷ್ಟು ಜನರ ಪ್ರಾಣ ಉಳಿಸಿದ ಪುಣ್ಯದ ಕೆಲಸ ಮಾಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.

ಗಾಂಧಿ ಆಸ್ಪತ್ರೆ 32ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆ ಪಂಚಮಿ ಟ್ರಸ್ಟ್ ಪಂಚಲಹರಿ ಫೌಂಡೇಶನ್ ಸಹಯೋಗದೊಂದಿಗೆ ಆಸ್ಪತ್ರೆಯ ಸಭಾಂಗಣದಲ್ಲಿ ಮಂಗಳವಾರ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನ ಎಲ್ಲ ದಾನಗಳಿಗಿಂತ ಶ್ರೇಷ್ಠವಾದುದು. ಇಂದಿನ ದಿನಗಳಲ್ಲಿ ರಕ್ತದ ಆವಶ್ಯಕತೆಯಿದ್ದು, ಹೆಚ್ಚೆಚ್ಚು ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ನಡೆಯಬೇಕಾಗಿದೆ. ಛಾಯಾಚಿತ್ರ ಪ್ರದರ್ಶನದಲ್ಲಿ ಮಾರಾಟವಾದ ಚಿತ್ರಗಳಿಂದ ಬಂದ ಹಣವನ್ನು ‘ಹೋಮ್ ಡಾಕ್ಟರ್‌ ಫೌಂಡೇಶನ್’ ಸಂಸ್ಥೆಗೆ ನೀಡುವ ಡಾ। ವ್ಯಾಸರಾಜರ ನಡೆಯು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಗಾಂಧಿ ಆಸ್ಪತ್ರೆಯ ಸ್ಥಾಪಕ ಎಂ. ಹರಿಶ್ಚಂದ್ರ ಮಾತನಾಡಿ, ಆಸ್ಪತ್ರೆ ನಿರಂತರವಾಗಿ ರಕ್ತದಾನ ಶಿಬಿರ, ಪರಿಸರ ಕಾಳಜಿ ಸಹಿತ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದಕ್ಕೆ ಹೆಮ್ಮೆಯಾಗುತ್ತದೆ. 25 ಬೆಡ್ ನಿಂದ ಆರಂಭಗೊಂಡ ಆಸ್ಪತ್ರೆ ಪ್ರಸ್ತುತ 100 ಬೆಡ್ ಗಳ ಸುಸಜ್ಜಿತ ಆಸ್ಪತ್ರೆಯಾಗಿ ಮುಂದುವರಿಯುತ್ತಿದೆ ಎಂದು ತಿಳಿಸಿದರು. ಭಾರತೀಯ ವೈದ್ಯ ಮಂಡಳಿ ಉಡುಪಿ ಕರಾವಳಿ ಘಟಕ ಅಧ್ಯಕ್ಷ ಡಾ|ಅಶೋಕ್ ಕುಮಾರ್‌ ಕಾಮತ್ ಶುಭಾಶಂಸನೆಗೈದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ|ವ್ಯಾಸರಾಜ ತಂತ್ರಿ ಅವರಿಂದ ಆಯೋಜಿಸಲಾದ ‘ಬಹುಚಿತ್ರ ಜಗತ್’ ‘ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಲಾಯಿತು. ಸಂಜೆ ರಾಜಾಂಗಣದಲ್ಲಿ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರ ಅನುಗ್ರಹದಿಂದ, ಬಾಲ ಪ್ರತಿಭೆ ಗಂಗಾ ಶಶಿಧರನ್ ಅವರಿಂದ ವಯೋಲಿನ್ ಸಂಗೀತ ಕಛೇರಿ ನಡೆಯಿತು. ಇದೇ ಸಂದರ್ಭ ಅವರ ಸಾಧನೆ ಗುರುತಿಸಿ ‘ನಾದಗಂಗಾ ಲಹರಿ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.

ಜಿಲ್ಲಾ ರಕ್ತನಿಧಿ ಮುಖ್ಯಸ್ಥೆ ಡಾ। ವೀಣಾ ಕುಮಾರಿ, ಲಕ್ಷ್ಮೀ ಹರಿಶ್ಚಂದ್ರ, ಡಾ|ವಿದ್ಯಾ ವ್ಯಾಸರಾಜ ತಂತ್ರಿ, ಡಾ|ಪಂಚಮಿ ಉಪಸ್ಥಿತರಿದ್ದರು.