ನರ್ಮ್ ಬಸ್ ಸೇವೆಯನ್ನು ತಕ್ಷಣವೇ ಆರಂಭಿಸಿ: ಖಾಸಗಿ ಬಸ್ ಗಳ ಒತ್ತಡಕ್ಕೆ ಮಣಿದು ಜನರನ್ನು ಸಂಕಷ್ಟಕ್ಕೆ ತಳ್ಳಬೇಡಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ: ಜಿಲ್ಲಾಧಿಕಾರಿ ಕಚೇರಿಗೆ ಬರುವ ಅಧಿಕಾರಿ ಹಾಗೂ ನೌಕರರಿಗೆ ನರ್ಮ್ ಬಸ್ ನ ವ್ಯವಸ್ಥೆ ಮಾಡಲಾಗಿದೆ. ಆದರೆ ಖಾಸಗಿ ಕಂಪೆನಿಗಳಿಗೆ ದುಡಿಯುವ ನೌಕರರಿಗೆ ನರ್ಮ್ ಬಸ್ ಗಳನ್ನು ಒದಗಿಸದಿರುವುದು ಜಿಲ್ಲಾಡಳಿತದ ದ್ವಿಮುಖ ನೀತಿಯನ್ನು ತಿಳಿಸುತ್ತದೆ. ಜಿಲ್ಲೆಯಲ್ಲಿ ತಕ್ಷಣವೇ ನರ್ಮ್ ಬಸ್ ಗಳ ಸೇವೆಯನ್ನು ಆರಂಭಿಸಬೇಕು. ಖಾಸಗಿ ಬಸ್ ಗಳ ಒತ್ತಡಕ್ಕೆ ಮಣಿದು ಜನರನ್ನು ಸಂಕಷ್ಟಕ್ಕೆ ತಳ್ಳುವ ಕೆಲಸವನ್ನು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಮಾಡಬಾರದು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ನಾನು ಶಾಸಕನಾಗಿ, ಮಂತ್ರಿಯಾಗಿ ಉಡುಪಿ ಜನತೆಯ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರು, ಶಾಲಾ ಮಕ್ಕಳು ಹಾಗೂ ಮಹಿಳೆಯರು ಅನುಕೂಲಕ್ಕಾಗಿ ಕಾನೂನು ಹೋರಾಟದ ಮೂಲಕ ಯಾವುದೇ ಒತ್ತಡಕ್ಕೆ ಜಗ್ಗದೆ ಜಿಲ್ಲೆಗೆ ಸರ್ಕಾರಿ ನರ್ಮ್ ಬಸ್ ಗಳನ್ನು ತರುವ ಕೆಲಸವನ್ನು ಮಾಡಿದ್ದೇನೆ. ನಾನು ಎಲ್ಲಿಯವರೆಗೆ ಅಧಿಕಾರದಲ್ಲಿ ಇದ್ದೆ, ಅಲ್ಲಿಯವರೆಗೆ ನರ್ಮ್ ಬಸ್ ಗಳು ಚೆನ್ನಾಗಿ ನಡೆಯುತ್ತಿದ್ದವು. ಆದರೆ ನಾನು ಸೋತ ನಂತರ ಒಂದೊಂದೆ ನರ್ಮ್ ಬಸ್ ಗಳನ್ನು ಕಡಿಮೆಗೊಳಿಸಿ, ಈಗ ಸಂಪೂರ್ಣವಾಗಿ ನರ್ಮ್ ಬಸ್ ಗಳ ಓಡಾಟವನ್ನು ಸ್ಥಗಿತಗೊಳಿಸಿದ್ದಾರೆ. ಇದು ಸರಿಯಾದ ವ್ಯವಸ್ಥೆಯಲ್ಲ. ಇದು ನರ್ಮ್ ಬಸ್ ಗಳನ್ನು ನಾಶ ಮಾಡುವ ಹುನ್ನಾರ ಎಂದು ಅವರು ಇಂದು ವಿಡಿಯೋ ಹೇಳಿಕೆಯ ಮೂಲಕ ಆರೋಪಿಸಿದ್ದಾರೆ.
*ಲಾಭ-ನಷ್ಟ ನೋಡ್ಬೇಡಿ; ಜನರ ಹಿತ ಕಾಪಾಡಿ*
ಸರ್ಕಾರಿ ಬಸ್ ಗಳು ಜನರ ಉಪಯೋಗಕ್ಕಾಗಿ ಇರುವ ಸಾರಿಗೆ. ಅದರಲ್ಲಿ ಲಾಭ-ನಷ್ಟ ನೋಡುವ ಪ್ರಶ್ನೆ ಬರುವುದಿಲ್ಲ. ಜಿಲ್ಲಾಡಳಿತ ಲಾಭ-ನಷ್ಟ ನೋಡುವ ಮೊದಲು ಜನರ ಹಿತ ಕಾಪಾಡುವ ಕೆಲಸ ಮಾಡಬೇಕು ಎಂದು ಪ್ರಮೋದ್ ಒತ್ತಾಯಿಸಿದರು.
*ನರ್ಮ್ ಬಸ್ ಗಳನ್ನು ಉಳಿಸಿ*
ಎಲ್ಲರ ಬಳಿಯಲ್ಲೂ ಸ್ವಂತ ವಾಹನ ಇಲ್ಲ. ಬಹುತೇಕ ಮಹಿಳೆಯರು, ಬಡವರು ತಮ್ಮ ಕೆಲಸಕಾರ್ಯಗಳಿಗೆ ಹೋಗಲು ಬಸ್ ಅನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಖಾಸಗಿ ಬಸ್ ಸಂಚಾರವನ್ನು ನಿಲ್ಲಿಸಿ, ನರ್ಮ್ ಬಸ್ ಗಳ ಓಡಾಟಕ್ಕೂ ತಡೆಯೊಡ್ಡಿರುವುದು ಸರಿಯಾದ ಕ್ರಮವಲ್ಲ. ಖಾಸಗಿ ಬಸ್ ನವರಿಗೆ ನರ್ಮ್ ಬಸ್ ಗಳನ್ನು ನಾಶ ಮಾಡಬೇಕೆಂಬ ಉದ್ದೇಶವಿದೆ. ಆದರೆ ನರ್ಮ್ ಬಸ್ ಗಳನ್ನು ಉಳಿಸಿ, ಜನರ ಸೇವೆಗೆ ಒದಗಿಸುವುದು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
*ಖಾಸಗಿಯವರ ಹಿತ ಕಾಯಲು ಸರ್ಕಾರಿ ಸೇವೆಯನ್ನು ಬಲಿಕೊಡಬೇಡಿ*
ನನ್ನ ಅವಧಿಯಲ್ಲಿ ಉಡುಪಿ ಸಿಟಿಯ ನರ್ಮ್ ಬಸ್ ನಿಲ್ದಾಣಕ್ಕೆ 4 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಜಾಗ ಗುರುತಿಸಿ, ಕಟ್ಟಡ ನಿರ್ಮಾಣ ಮಾಡಲು 30 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಅದೇ ರೀತಿ ಡಿಪೋದಲ್ಲಿ 8 ಕೋಟಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಇದೆಲ್ಲವೂ ಯಾರದ್ದೊ ಲಾಭಕ್ಕಾಗಿ ನಾಶ ಆಗಬಾರದು. ಇದನ್ನು ಉಳಿಸಿ ಸಾರ್ವಜನಿಕರ ಸೇವೆಗೆ ಒದಗಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಕೊರೊನಾದಿಂದ ಆರೋಗ್ಯಕ್ಕೆ ಮತ್ತು ಜನರ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ‌. ಇಂದು ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲಾಗಿದ್ದರೂ ಒಳಗಿನ ಆರ್ಥಿಕ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿದ್ದು, ಜನರು ತಮ್ಮ ಕೆಲಸಗಳಿಗೆ ಹೋಗಬೇಕಾಗಿದೆ. ಆದರೆ ಬಸ್ ಸಂಚಾರ ಇಲ್ಲದೆ ಅವರು ಪರದಾಡುವ ಸ್ಥಿತಿ ಎದುರಾಗಿದೆ. ಹಾಗಾಗಿ ಇಂದಿನ ಕೊರೊನಾ ಸಂಕಟದ ಸಂದರ್ಭದಲ್ಲಿ ನಾನು ಸಚಿವನಾಗಿದ್ದ ಜಿಲ್ಲೆಗೆ ತಂದಿರುವ 62 ನರ್ಮ್ ಬಸ್ ಗಳು ಸಾರ್ವಜನಿಕರ ಉಪಯೋಗಕ್ಕೆ ಬರಬೇಕಿತ್ತು ಎಂದು ಪ್ರಮೋದ್ ಅಭಿಪ್ರಾಯಪಟ್ಟರು.