ಉಡುಪಿ: ರೋಬೋ ಸಾಫ್ಟ್‌ ಕಂಪೆನಿಯಲ್ಲಿ ಬೆಂಕಿ ಅವಘಡ; ಲಕ್ಷಾಂತರ ರೂ. ನಷ್ಟ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ ಎಂಬಲ್ಲಿ ಕಾರ್ಯಚರಿಸುತ್ತಿರುವ ರೋಬೋ ಸಾಫ್ಟ್‌ ಕಂಪೆನಿಯಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿಗಳ ಸೊತ್ತು ಬೆಂಕಿಗಾಹುತಿ ಆಗಿದೆ ಎಂದು ತಿಳಿದುಬಂದಿದೆ.

ಕಂಪೆನಿಯ ತಳ ಮಹಡಿಯ ವಿದ್ಯುತ್ ಶಾರ್ಟ್ ನಿಂದ ಮಧ್ಯರಾತ್ರಿ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಭದ್ರತಾ ಸಿಬ್ಬಂದಿ ಕಂಪೆನಿಯಲ್ಲಿದ್ದ ಬೆಂಕಿ ನಂದಿಸುವ ಸಾಧನಗಳಾದ ಡ್ರೈ ಪೌಡರ್ ವಿಧಾನ ಪರಿಕರ ಹಾಗೂ ಕಾರ್ಬನ್ ಡೈ ಅಕ್ಸೈಡ್ ವಿಧಾನ ಪರಿಕರ ಬಳಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದರು. ಅಲ್ಲದೆ, ಕೂಡಲೇ ಉಡುಪಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಸುಮಾರು ಒಂದುವರೆ ಗಂಟೆ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಾಫ್ಟ್‌ವೇರ್ ಸಿಬ್ಬಂದಿಗಳಿಗೆ ವರ್ಕ್ ಫ್ರಮ್ ಹೋಮ್ ಇದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ. ಆದರೆ ಸಾಫ್ಟ್‌ವೇರ್ ಸರ್ವರ್ ಗಳು ಸುಟ್ಟು ಹೋಗಿವೆ. ಅವಘಡದಿಂದ ಸುಮಾರು 60 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.