ಉಡುಪಿ: ಕರ್ವಾಲು ತ್ಯಾಜ್ಯ ಘಟಕಕ್ಕೆ ತಜ್ಞರ ಭೇಟಿ

ಉಡುಪಿ: ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಮಂತ್ರಾಲಯದ ಸೂಚನೆಯನ್ವಯ ಉಡುಪಿಯ ನೀಲಾವರ ಗೋಶಾಲೆಗೆ ಭೇಟಿ ನೀಡಲು ಬಂದಿದ್ದ ತಜ್ಞರು ಬುಧವಾರ ಉಡುಪಿ ನಗರ ಸಭೆಗೆ ಭೇಟಿ ನೀಡಿದರು.

ಲೋಕೇಂದ್ರ ಜೋಶಿ ಮತ್ತು ರಾಜೇಶ್ ಅಯ್ಯಪ್ಪ ಸೂರ್ ಅವರು ಶಾಸಕ ಕೆ ರಘುಪತಿ ಭಟ್ , ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ , ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ , ಆಯುಕ್ತ ಡಾ ಉದಯ ಶೆಟ್ಟಿ ಸ್ಥಾಯೀ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ ಹಾಗೂ ಪರಿಸರ ಇಂಜಿನಿಯರ್ ಸ್ನೇಹಾ ಕೆ.ಎಸ್. ಅವರೊಡನೆ ಸಮಾಲೋಚನೆ ನಡೆಸಿದರು.

ಉಡುಪಿ ನಗರದಲ್ಲಿ ನಿತ್ಯ ಲಭಿಸುವ ಜೈವಿಕ ತ್ಯಾಜ್ಯ ಬಳಸಿ ವಿದ್ಯುತ್ ತಯಾರಿ ಸಾಧ್ಯವಿದ್ದು ಕೇಂದ್ರ ಸರ್ಕಾರವೂ ಇದಕ್ಕೆ ವಿಶೇಷ ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದರು.

ಶಾಸಕರ ಸೂಚನೆಯಂತೆ ಅಲೆವೂರು ಕರ್ವಾಲಿನ ತ್ಯಾಜ್ಯ ಸಂಸ್ಕರಣ ಘಟಕಕ್ಕೂ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳಲ್ಲಿ ಸ್ಥೂಲ ಮಾಹಿತಿ ಪಡೆದರು. ಇಲ್ಲಿ ದಿನವಹಿ ಅಂದಾಜು 50 ಟನ್ ಜೈವಿಕ ತ್ಯಾಜ್ಯ ಲಭಿಸುವ ಬಗ್ಗೆ ಮಾಹಿತಿ ಲಭಿಸಿದ್ದು, ಅದರನ್ವಯ ಪ್ರತೀ ದಿನ ಸುಮಾರು 3000 ಯುನಿಟ್ ಉತ್ಪಾದನೆ ಸಾಧ್ಯವಿದೆ. ಈ ಕುರಿತು ಒಂದು ಯೋಜನಾ ವರದಿಯನ್ನು ಸಿದ್ಧಪಡಿಸಿ ಕಳುಹಿಸುವುದಾಗಿ ಲೋಕೇಂದ್ರ ಜೋಶಿ, ರಾಜೇಶ್ ಅಯ್ಯಪ್ಪ ಸೂರ್ ತಿಳಿಸಿದ್ದಾರೆ.

ಕೇಂದ್ರದ ಸಹಯೋಗವನ್ನು ಪಡೆದು ಜೈವಿಕ ವಿದ್ಯುತ್ ಸ್ಥಾವರ ಸ್ಥಾಪಸಿದಲ್ಲಿ ಉಡುಪಿಯ ಜನತೆಗೆ ಬಹಳ ಉಪಯೋಗವಾಗಲಿದೆ ಎಂದು ಅವರು ತಿಳಿಸಿದ್ದಾರೆ. ನಗರಸಭಾ ಸಿಬ್ಬಂದಿ ಸುರೇಂದ್ರ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.