ಉಡುಪಿ: ಸಂಭ್ರಮದ ಈದ್ ಮಿಲಾದ್ ಆಚರಣೆ

ಉಡುಪಿ: ಪ್ರವಾದಿ ಮುಹಮ್ಮದ್‌ ಅವರ ಜನ್ಮದಿನದ ಅಂಗವಾಗಿ ಆಚರಿಸಲ್ಪಡುವ ಈದ್‌ ಮಿಲಾದ್‌ ಹಬ್ಬವನ್ನು ಮುಸ್ಲಿಂ ಬಾಂಧವರು ಭಾನುವಾರ ಸಂಭ್ರಮ ಸಡಗರದಿಂದ ಆಚರಿಸಿದರು.
ಈದ್‌ಮಿಲಾದ್‌ ಪ್ರಯುಕ್ತ ದೊಡ್ಡಣಗುಡ್ಡೆ ಮತ್ತು ಹೂಡೆಯಲ್ಲಿ ಮೆರವಣಿಗೆ ನಡೆಯಿತು.
ದೊಡ್ಡಣಗುಡ್ಡೆ ರಹ್ಮಾನಿಯ ಜುಮಾ ಮಸೀದಿಯಲ್ಲಿ ಸ್ಥಳೀಯ ಖತೀಬ್‌ ಅಬ್ದುಲ್‌ ಸಲಾಂ ಮದನಿ ದುವಾ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಅಬ್ದುಲ್‌ ಖಾದರ್‌, ಉಪಾಧ್ಯಕ್ಷ ಅಮಾನುಲ್ಲಾ ಸಾಹೇಬ್‌, ಎಸ್‌ವೈಎಸ್‌ ರಾಜ್ಯ ಸದಸ್ಯ ಹಂಝಾತ್‌ ಕೋಡಿ ಹೆಜಮಾಡಿ ಉಪಸ್ಥಿತರಿದ್ದರು.
ಬಳಿಕ ಈದ್‌ ಮಿಲಾದ್‌ ಮೆರವಣಿಗೆಯು ಕರಂಬಳ್ಳಿ, ಗುಂಡಿಬೈಲು ಶಾಲಾ ಮೈದಾನ ಮಾರ್ಗವಾಗಿ ಮಸೀದಿಯಲ್ಲಿ ಸಮಾಪಗೊಂಡಿತು. ಇದರಲ್ಲಿ ಮದ್ರಸ ಮಕ್ಕಳು, ಮಸೀದಿಯ ಆಡಳಿತ ಕಮಿಟಿ ಸದಸ್ಯರು, ಯಂಗ್‌ಮೆನ್ಸ್‌ ಅಸೋಸಿಯೇಶನ್‌ ಪದಾಧಿಕಾರಿಗಳು, ಎಸ್‌ವೈಎಸ್‌, ಎಸ್‌ಎಸ್‌ಎ, ಎಸ್‌ಬಿಎಸ್‌ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.
ತೋನ್ಸೆ ಹೂಡೆ ಎಸ್‌ಎಸ್‌ಎ- ಘಟಕ ವತಿಯಿಂದ ಜಷ್ನೆ ಈದ್‌ ಮೀಲಾದ್‌ ಪ್ರಯುಕ್ತ ಹೂಡೆಯಲ್ಲಿ ಹಮ್ಮಿಕೊಳ್ಳಲಾದ ಸ್ವಲಾತ್‌ ಮೆರವಣಿಗೆಗೆ ಹೂಡೆ ದಾರುಸ್ಸಲಾಂ ಮದ್ರಸ ವಠಾರದಲ್ಲಿ ಚಾಲನೆ ನೀಡಲಾಯಿತು. ಬಳಿಕ ಮೆರವಣಿಗೆಯು ಹೂಡೆಯ ಹಝ್ರತ್‌ ಶೇಕ್‌ ಶಬೀರ್‌‌ ವಲಿಯುಲ್ಲಾ ದರ್ಗಾಕ್ಕೆ ತೆರಳಿ ಬಳಿಕ ಹೂಡೆ ಪೇಟೆಯಲ್ಲಿ ಸಾಗಿ ಮರಳಿ ದಾರುಸ್ಸಲಾಂ ವಠಾರದಲ್ಲಿ ಮುಕ್ತಾಯಗೊಂಡಿತು.