ಜಗತ್ತಿನಲ್ಲಿ 35 ಮಿಲಿಯನ್ ಮಾದಕ ದ್ರವ್ಯ ವ್ಯಸನಿಗಳು: ಡಾ.ಭಂಡಾರಿ

ಉಡುಪಿ, ಜೂ.26: ಜಗತ್ತಿನಲ್ಲಿ ಇಂದು 35 ಮಿಲಿಯನ್ ಮಂದಿ ಮಾದಕ ದ್ರವ್ಯ ವ್ಯಸನಿಗಳು ಇದ್ದಾರೆ. 11 ಮಿಲಿಯನ್ ಮಂದಿ ಚುಚ್ಚುಮದ್ದಿನ ಮೂಲಕ ಮಾದಕ ದ್ರವ್ಯ ಸೇವಿಸುತ್ತಿದ್ದಾರೆ. ಹೀಗೆ ಅಫೀಮು ಸೇವಿಸುವ ಮೂರನೆ ಎರಡರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಮಾನಸಿಕ ತಜ್ಞ ಡಾ. ಪಿ.ವಿ.ಭಂಡಾರಿ ತಿಳಿಸಿದ್ದಾರೆ.
ಉಡುಪಿ ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವತಿಯಿಂದ ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆಯ ಪ್ರಯುಕ್ತ ಬುಧವಾರ ನಡೆದ ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ವೈದ್ಯರು, ಔಷಧ ಮಾರಾಟಗಾರರು ಹಾಗೂ ನರ್ಸ್‌ಗಳು ಮಾದಕ ವಸ್ತುಗಳ ವ್ಯಸನಕ್ಕೆ ಕಾರಣಕರ್ತರಾಗುತ್ತಿದ್ದಾರೆ. ಇವರಿಗೆ ಸುಲಭವಾಗಿ ಸಿಗುವ ಈ ಔಷಧಗಳು ವ್ಯಸನಕ್ಕೆ ಬಳಕೆಯಾಗುತ್ತದೆ ಎಂದು ಅವರು ದೂರಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ವಿಭಾಗದ ಸಹಾಯಕ ಔಷಧ ನಿಯಂತ್ರಕ ಕೆ.ವಿ.ನಾಗರಾಜ್ ಮಾತನಾಡಿ, ಯುವಜನತೆ ಮಾದಕ ವಸ್ತುಗಳನ್ನು ಪಡೆಯಲು ನರ್ಸ್‌ಗಳು ಹಾಗೂ ಫೋಷಕರು ದಾರಿ ಮಾಡಿಕೊಡುತ್ತಿದ್ದಾರೆ. ಸರಕಾರ ಈ ಔಷಧಗಳನ್ನು ನಿಷೇಧಿಸುವ ಮೊದಲೇ ನಾವು ಎಚ್ಚೆತ್ತುಕೊಂಡರೆ ನಿಜವಾದ ಸಿಗಬೇಕಾದ ರೋಗಿಗಳಿಗೆ ಆ ಔಷಧಗಳು ದೊರೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅರ್ಹ ರೋಗಿಗಳು ಶಾಪ ಹಾಕುವ ಕಾಲ ಎದುರಿಸಬೇಕಾಗುತ್ತದೆ ಎಂದರು.
1989ರಿಂದ ಅಂದರೆ ಕಳೆದ 30ವರ್ಷಗಳಿಂದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಮಾಡುತ್ತ ಬಂದರೂ, ಹಲವು ಕಾನೂನುಗಳನ್ನು ಜಾರಿಗೆ ತಂದರೂ ಇನ್ನು ಕೂಡ ವ್ಯಸನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಮಾದಕ ದ್ರವ್ಯ ಗಳನ್ನು ಬಳಸುವವರ ಸಂಖ್ಯೆ ದಿನೇ ದಿನೇ ಜಾಸ್ತಿ ಆಗುತ್ತಲೇ ಇದೆ ಎಂದು ತಿಳಿಸಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮಾನಸಿಕ ತಜ್ಞ ಡಾ.ಮಾನಸ, ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ನಾಗೇಶ್ ಸೋಮಯಾಜಿ, ಮನಶಾಸ್ತ್ರಜ್ಞ ನಾಗರಾಜ್ ಮೂರ್ತಿ ಉಪಸ್ಥಿತರಿದ್ದರು.