ಉಡುಪಿ, ದ.ಕ. ಜಿಲ್ಲೆಯ ಐದು ಟೋಲ್ ಗೇಟ್ ಗಳಲ್ಲಿ ಹಗಲು ದರೋಡೆ: ಯೋಗೀಶ್ ಶೆಟ್ಟಿ

ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೇವಲ 93 ಕಿ.ಮೀ. ಅಂತರದಲ್ಲಿ ಇರುವ ಐದು ಟೋಲ್ ಗಳಲ್ಲಿ ಪ್ರತಿದಿನ ಹಗಲು ದರೋಡೆ ನಡೆಯುತ್ತಿದೆ ಎಂದು ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಆರೋಪಿಸಿದ್ದಾರೆ.

ಕಾನೂನು ಪ್ರಕಾರ ರಸ್ತೆ ನಿರ್ವಹಣಾ ಶುಲ್ಕ ಸಂಗ್ರಹಿಸುವ ಟೋಲ್ ಗೇಟ್ ಗಳು ಕನಿಷ್ಠ 60 ಕಿ.ಮೀ. ಅಂತರದಲ್ಲಿ ಇರಬೇಕು. ಆದರೆ ಉಭಯ ಜಿಲ್ಲೆಗಳಲ್ಲಿ ಕೇವಲ 93 ಕಿ.ಮೀ. ಅಂತರದಲ್ಲಿ ಐದು ಟೋಲ್ ಗಳಿವೆ. ಇದರ ಮೂಲಕ ವಾಹನ ಚಾಲಕರನ್ನು ಲೂಟಿ ಮಾಡುವ ಕೆಲಸ ಆಗುತ್ತಿದೆ ಎಂದು ದೂರಿದ್ದಾರೆ.

ಉಭಯ ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಸಂಸದರು ಹಾಗೂ ಬಹುತೇಕ ಬಿಜೆಪಿ ಶಾಸಕರು ಇದ್ದಾರೆ. ಆದರೂ ಟೋಲ್ ಗೇಟ್ ಗಳಿಂದ ಎಗ್ಗಿಲ್ಲದೆ ಹಗಲು ದರೋಡೆ ನಡೆಯುತ್ತಿದೆ. ಅಕ್ರಮ ಟೋಲ್ ಗೇಟನ್ನು ತೆಗೆದು ಹಾಕುತ್ತೇನೆ ಎಂದು ಘೋಷಣೆ ಮಾಡಿದವರು ಇದೀಗ ಆಡಳಿತ ಪಕ್ಷದ ರಾಜ್ಯ ಅಧ್ಯಕ್ಷರಾಗಿದ್ದಾರೆ. ಆದರೂ ಲೂಟಿ ಮಾತ್ರ ನಿಂತಿಲ್ಲ ಎಂದು ಕಿಡಿಕಾರಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಟೋಲ್‍ಗೇಟ್ ನಡುವಿನ ಕನಿಷ್ಟ ಅಂತರ 60ಕಿ.ಮೀ. ಇರಲೇಬೇಕು. ಆದರೆ, ಕರಾವಳಿ ಜಿಲ್ಲೆಗಳಲ್ಲಿ ಹಾದುಹೋಗುವ ಕೇರಳ- ಗೋವಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಾಲ್ಕು ಟೋಲ್ ಗೇಟುಗಳು ಇವೆ. ದೇಶದ ಎಲ್ಲಿಯೂ ಇಲ್ಲದ ಕಾನೂನು ಕರಾವಳಿ ಕರ್ನಾಟಕದಲ್ಲಿ ಚಾಲ್ತಿಯಲ್ಲಿದೆ. ಇಂಥಾ ಅವ್ಯವಸ್ಥೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಸಮಾನ ಪಾಲುದಾರರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸ್ತುತ ಇರುವ ಎನ್ ಐಟಿಕೆ ಟೋಲ್ ಗೇಟನ್ನು ಕೂಡಲೇ ತೆರವು ಮಾಡಬೇಕು. ಮಂದಗತಿಯಲ್ಲಿ ಸಾಗುತ್ತಿರುವ ಹೆದ್ದಾರಿ ಕಾಮಗಾರಿಗಳನ್ನು ಶೀಘ್ರವೇ ಮುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.