ಉಡುಪಿ ಜಿಲ್ಲೆ: ಕಳೆದೆರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ವ್ಯಾಪಕವಾದ ಮಳೆ ಸುರಿಯುತ್ತಿದೆ. ಮಳೆಯ ನಿಮಿತ್ತ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸುತ್ತಾರೆ. ಇಂದು (july 5) ಉಡುಪಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಆದರೆ ಶಾಲಾ-ಕಾಲೇಜುಗಳಿಗೆ ರಜೆ ಇದ್ದರೂ ಜಿಲ್ಲೆಯ ಶಾಲಾ ಮುಖ್ಯಸ್ಥರು, ಕಾಲೇಜು ಪ್ರಾಂಶುಪಾಲರು ಪೂರ್ಣಕಾಲಿಕರಲ್ಲದ ಉಪನ್ಯಾಸಕರಿಗೆ, ಶಿಕ್ಷಕರಿಗೆ ಕಾಲೇಜಿಗೆ ಬಂದೇ ಬರಬೇಕು ಇಲ್ಲದಿಲ್ಲದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿ ಬೆದರಿಸುತ್ತಿರುವ ಕುರಿತು ಮಾಹಿತಿ ಲಭಿಸಿದೆ.ಈ ಕುರಿತು ಜಂಟಿ ಇಲಾಖೆಯೂ ಸುಮ್ಮನಿದೆ, ಪೂರ್ಣಕಾಲಿಕ ಉಪನ್ಯಾಸಕರಿಗೆ/ಶಿಕ್ಷಕರಿಗೆ ಮಳೆ ಇದ್ದರೂ ಶಾಲೆಗೆ/ಕಾಲೇಜಿಗೆ ಬರಬೇಕು ಎನ್ನುವ ನಿಯಮ ಸರಿ, ಆದರೆ ಅತಿಥಿ ಶಿಕ್ಷಕರಿಗೆ ಈ ನಿಯಮ ಸರಿಯಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ಸಾಮಾನ್ಯವಾಗಿ ಪಿ.ಯು ಮತ್ತು ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಶಾಲಾವಲಯದಲ್ಲೂ ಅತಿಥಿ ಶಿಕ್ಷಕರಿದ್ದಾರೆ.ಇವರಲ್ಲಿ ಕೆಲವರು ವಾರಪೂರ್ತಿ ಮತ್ತು ಕೆಲವು ಉಪನ್ಯಾಸಕರು ವಾರದ ಮೂರು-ನಾಲ್ಕು ದಿನ ಕರ್ತವ್ಯ ನಿರ್ವಹಿಸುತ್ತಾರೆ.ಮಳೆಯ ನಿಮಿತ್ತ ರಜೆ ಘೋಷಣೆಯಾದಲ್ಲಿ ವಿದ್ಯಾರ್ಥಿಗಳು ಲಭ್ಯರಿಲ್ಲದೇ ಅತಿಥಿ ಶಿಕ್ಷಕರಿಗೆ ತರಗತಿಗಳು ಇರುವುದಿಲ್ಲ.ಆದರೆ ನೀವು ಕಾಲೇಜಿಗೆ ಬರಲೇಬೇಕು,ಎಂದು ಶಾಲಾ-ಕಾಲೇಜು ಮುಖ್ಯಸ್ಥರು ದೂರದ ಊರುಗಳಿಂದ ತ್ರಾಸಪಟ್ಟು ದುಡಿಯಲು ಬರುವ ಅತಿಥಿ ಶಿಕ್ಷಕರಿಗೆ ವತ್ತಾಯಿಸುತ್ತಿದ್ದಾರೆ. ಹಾಗೆ ಸಂಸ್ಥೆಗೆ ಬಂದ ಅವರಿಗೆ ತರಗತಿ ಇಲ್ಲದಿದ್ದರೂ ಪೂರ್ಣಕಾಲಿಕ ಉಪನ್ಯಾಸಕರು ಮಾಡುವ ಕೆಲವೊಂದು ಕೆಲಸ ಕಾರ್ಯಗಳ ಹೊರೆ ನೀಡಿ ದುಡಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಮ್ಮ ಜೀವಕ್ಕೆ ಬೆಲೆ ಇಲ್ಲವೇ?
“ಪೂರ್ಣಕಾಲಿಕ ಉಪನ್ಯಾಸಕರಿಗೆ ಸರಕಾರದಿಂದ ಸಕಲ ಸೌಲಭ್ಯವೂ ಇದೆ.ಆದರೆ ಅವರಿಗೆ ಕೊಡುವ ಸಂಬಳ ಮತ್ತು ಇತರೆ ಸೌಲಭ್ಯಗಳು ಅತಿಥಿ ಉಪನ್ಯಾಸಕರಿಗೆ ಇಲ್ಲ.ಪೂರ್ಣಾವಧಿ ಉಪನ್ಯಾಸಕರು/ಶಿಕ್ಷಕರು ಮಳೆ ರಜೆ ಇದ್ದರೂ ಅವರಿಗಿರುವ ಸೌಲಭ್ಯಗಳ ಮೂಲಕ, ಎಷ್ಟೇ ಹಣ ವ್ಯಯಿಸಿ ಬೇಕಾದರೂ ಶಾಲೆ/ಕಾಲೇಜಿಗೆ ಬರಬಹುದು.ಬರುವುದು ಅವರ ಕರ್ತವ್ಯ ಕೂಡ. ಆದರೆ ಕಡಿಮೆ ಸಂಬಳ ಪಡೆಯುವ , ಯಾವ ಇತರೆ ಸೌಲಭ್ಯವೂ ಇಲ್ಲದ ಬೇರೆ ಬೇರೆ ತಾಲೂಕು ಕೇಂದ್ರಗಳಿಂದ ಕಷ್ಟ ಪಟ್ಟು ಬರುವ ಅತಿಥಿ ಉಪನ್ಯಾಸಕರಿಗೆ ಪ್ರಾಂಶುಪಾಲರು ಕಾಲೇಜಿಗೆ ಬರಲೇಬೇಕು ಎಂದು ವತ್ತಾಯಿಸುತ್ತಿರುವುದು ಅಮಾನವೀಯ, ಗ್ರಾಮೀಣ ಭಾಗಗಳಿಂದ ಅತಿಥಿ ಶಿಕ್ಷಕರು ಬರುವಾಗ ಮಳೆಯಿಂದ ಏನಾದರೂ ಜೀವಹಾನಿಯಾದರೆ ಯಾರು ಹೊಣೆ?ಪ್ರಾಂಶುಪಾಲರು ಅಥವಾ ಇಲಾಖೆ ಇದಕ್ಕೆ ಪರಿಹಾರ ಕೊಡುತ್ತಾರಾ? ಜಂಟಿ ಶಿಕ್ಷಣ ಇಲಾಖೆ ಈ ಬಗ್ಗೆ ನಿರ್ಲಕ್ಷ ತಾಳಿರುವುದು ಅಕ್ಷಮ್ಯ ಎನ್ನುತ್ತಾರೆ ಉಡುಪಿಯ ಅತಿಥಿ ಉಪನ್ಯಾಸಕ ರಾಜೇಶ್ ನಾಯಕ್ ಅವರು.
ಉಡುಪಿ ಜಿಲ್ಲೆಯ ಉಡುಪಿ ನಗರ ಮತ್ತು ಕಾರ್ಕಳ ತಾಲೂಕಿನ ಕೆಲವೊಂದು ಶಾಲಾ/ಕಾಲೇಜುಗಳು ಅತಿಥಿ ಶಿಕ್ಷಕರ ಜೀವಕ್ಕೆ ಬೆಲೆಯೇ ನೀಡದೇ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ ಎಂದವರು ಹೇಳುತ್ತಾರೆ.












