ರಾಷ್ಟ್ರೀಯ ವಿಪತ್ತು ನಿಧಿಯಿಂದ ಉಡುಪಿ ಜಿಲ್ಲೆಗೆ 10 ಕೋಟಿ ರೂ. ಬಿಡುಗಡೆ: ಸಚಿವ ಬೊಮ್ಮಾಯಿ

ಉಡುಪಿ: ರಾಷ್ಟ್ರೀಯ ವಿಪತ್ತು ನಿಧಿ(ಎನ್ ಡಿಆರ್ ಎಫ್)ಯಿಂದ ಉಡುಪಿ ಜಿಲ್ಲೆಗೆ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಜಿಲ್ಲೆಯ ಪಡುಬಿದ್ರಿ ಕಡಲ ತೀರದಲ್ಲಿ ಉಂಟಾಗಿರುವ ಕಡಲ್ಕೊರೆತ ಸ್ಥಳವನ್ನು ಪರಿಶೀಲನೆ ನಡೆಸಿದರು.
ಪ್ರಧಾನಿ ಜೊತೆ ನಿನ್ನೆ ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದೇವೆ. ಭೂಕುಸಿತ ತಡೆ, ಶಾಶ್ವತ ಪುನರ್ವಸತಿ ಕುರಿತಂತೆಯೂ ಮಾತುಕತೆ ನಡೆಸಿದ್ದೇವೆ. ಹಾಗೆ ಕಡಲ್ಕೊರೆತ ನಿಯಂತ್ರಣಕ್ಕೆ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದು, ಎಡಿಬಿ ನೆರವಿನೊಂದಿಗೆ ಶಾಶ್ವತ ಪರಿಹಾರದ ಬಗ್ಗೆ ಚರ್ಚಿಸಲಾಗಿದೆ ಎಂದರು.
*ಭೂಕುಸಿತ ಆಗುವ ಪ್ರದೇಶಗಳ ಸರ್ವೆ*
ಪಶ್ಚಿಮಘಟ್ಟದಲ್ಲಿ ಭೂಕುಸಿತ ಆಗುವ ಪ್ರದೇಶಗಳ ಸರ್ವೆ ನಡೆಸಲಾಗುವುದು. ಬಯೋಲಾಜಿಕಲ್ ಸರ್ವೆ ಆಫ್ ಇಂಡಿಯಾದ ಮೂಲಕ ಸರ್ವೆ ನಡೆಸಲು ಉದ್ದೇಶಿಸಲಾಗಿದೆ. ಸರ್ವೆ ಜತೆಗೆ ಮ್ಯಾಪಿಂಗ್ ಕೂಡಾ ಮಾಡಬೇಕು ಎಂದು ಹೇಳಿದರು.
ಜಿಪಂ ಅಧ್ಯಕ್ಷ ದಿನಕರ ಬಾಬು, ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ, ಜಿ.ಪಂ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಗೀತಾಂಜಲಿ ಸುವರ್ಣ, ಜಿಲ್ಲಾಧಿಕಾರಿ ಜಿ. ಜಗದೀಶ್, ತಹಶೀಲ್ದಾರ್ ಮಹಮ್ಮದ್ ಇಸಾಖ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಪಂ ಸಿಇಒ ಪ್ರೀತಿ ಗೆಹ್ಲೋಟ್, ಬಿಜೆಪಿ ಮಂಗಳೂರು ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಮುಖಂಡರಾದ ಶ್ರೀಕಾಂತ್ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಂದಾಯ ನಿರೀಕ್ಷಕ ರವಿಶಂಕರ್, ಗ್ರಾಮ ಕರಣಿಕ ಶಾಮ್ ಸುಂದರ್ ಉಪಸ್ಥಿತರಿದ್ದರು.