ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನೂತನ ಸಚಿವರಿಗೆ ಅಭಿನಂದನೆ

ಉಡುಪಿ: ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿಕೊಂಡು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳ ಸಹಕಾರದೊಂದಿಗೆ ಅಭಿವೃದ್ಧಿಯ ಪರ್ವವನ್ನು ಆರಂಭಿಸಲಾಗುವುದು ಎಂದು ನೂತನ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಅಂಬಾಗಿಲು ಅಮೃತ್ ಗಾರ್ಡನ್‌ನಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮುಖ್ಯಮಂತ್ರಿ ನೀಡುವ ಯಾವುದೇ ಖಾತೆಯನ್ನು ಪ್ರಾಮಾಣಿಕವಾಗಿ ನಿಭಾಯಿಸಲಾಗುವುದು. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಒಂದಾಗಿ ಒಟ್ಟಾಗಿ ನಮ್ಮಲ್ಲಿರುವ ಎಲ್ಲ ಅಧಿಕಾರ ಮತ್ತು ಹೊಣೆಗಾರಿಕೆಯನ್ನು ಜಿಲ್ಲೆಯ ಅಭಿವೃದ್ಧಿಗೆ ಬಳಸಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

ಸಾಮಾನ್ಯ ಕಾರ್ಯಕರ್ತನಿಗೂ ಸಚಿವನಾಗುವ ಅವಕಾಶ ಮಾಡಿಕೊಡುವ ಯಾವುದಾದರೂ ಪಕ್ಷವಿದ್ದರೆ ಅದು ಬಿಜೆಪಿಯಲ್ಲಿ ಮಾತ್ರ. ಅದಕ್ಕೆ ನಾನೇ ಉದಾಹರಣೆ ಎಂದರು.

ಅಭಿನಂದನೆ ಸ್ವೀಕರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ದೇಶದ ಜಟಿಲ ಹಾಗೂ ಜ್ವಲಂತ ಸಮಸ್ಯೆಗಳನ್ನು ಸರಳವಾಗಿ ಬಗೆಹರಿಸಿದ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನತೆಯಲ್ಲಿ ಹೊಸ ಭರವಸೆ ಮೂಡಿಸಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಬೇಕು ಎನ್ನುವುದು ಎಲ್ಲರ ಆಶಯವಾಗಿದ್ದು, ಬೊಮ್ಮಾಯಿ ಸರಕಾರದಲ್ಲಿ ಅದು ಈಡೇರಲಿದೆ ಎಂದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ, ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಮಾತನಾಡಿದರು.

ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಬಿಜೆಪಿ ರಾಜ್ಯ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಬಿ. ಎನ್. ಶಂಕರ ಪೂಜಾರಿ, ಗೀತಾಂಜಲಿ ಸುವರ್ಣ, ಕುತ್ಯಾರ್ ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸುಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಇದಕ್ಕೂ ಮೊದಲು ಸಚಿವರನ್ನು ಪರ್ಕಳದಲ್ಲಿ ಸ್ವಾಗತಿಸಿ ವಾಹನ ರ್ಯಾಲಿ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು.