ಉಡುಪಿ ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ

ಉಡುಪಿ: ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ಸಂಘ ಹಾಗೂ ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಪ.ಪೂ. ಕಾಲೇಜುಗಳ ಜೀವಶಾಸ್ತ್ರ ಉಪನ್ಯಾಸಕರಿಗೆ ಒಂದು ದಿನದ ಕಾರ್ಯಾಗಾರ ಜು 21 ರಂದು ಉಡುಪಿ ಜ್ಞಾನಸುಧಾ ಪ.ಪೂ.
ಕಾಲೇಜಿನ ನಾಗಬನ ಕ್ಯಾಂಪಸ್ ನಲ್ಲಿ ನಡೆಯಿತು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಾರುತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಂಬರುವ ವಿವಿಧ ರೀತಿಯ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸುವಲ್ಲಿ ಉಪನ್ಯಾಸಕರ ಪಾತ್ರದ ಮಹತ್ವವನ್ನು ತಿಳಿಸಿದರು.

ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಸವಾಲುಗಳ ನಡುವೆ ಉಪನ್ಯಾಸಕರು ಉತ್ತಮವಾದ ಮೌಲ್ಯಗಳನ್ನು ರೂಢಿಸಿಕೊಂಡು ಮಕ್ಕಳಿಗೆ ಸುದೃಢ ಭವಿಷ್ಯ ಕಲ್ಪಿಸಿ ತಾವೂ ಕೂಡ ಅತ್ಯುತ್ತಮವಾದ ಜೀವನವನ್ನು ಹೊಂದುವಂತಾಗಬೇಕು. ಜೀವಶಾಸ್ತ್ರದಲ್ಲಿ ಮಹತ್ತರ ಪಾತ್ರ ವಹಿಸುವ ಪ್ರಯೋಗಾಲಯ ಬಳಕೆಯ ಉದ್ದೇಶ ನಿಜವಾದ ಅರ್ಥದಲ್ಲಿ ಗೊತ್ತಾಗಬೇಕು. ಸಂಶೋಧನೆ ಜೀವನದ ಒಂದು ಅಂಗವಾಗಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಜೀವಶಾಸ್ತ್ರ ವಿಷಯದಲ್ಲಿ ೨೦೨೨-೨೩ ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳ ಕಾಲೇಜುಗಳನ್ನು ಗುರುತಿಸಿ ಉಪನ್ಯಾಸರನ್ನು ಅಭಿನಂದಿಲಾಯಿತು.

ಮುಖ್ಯ ಅತಿಥಿಗಳಾಗಿ ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ , ಕಾರ್ಕಳ ಜ್ಞಾನಸುಧಾ ಪ.ಪೂ. ಕಾಲೇಜು ಗಣಿತನಗರ ಕ್ಯಾಂಪಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರು ಭಾಗವಹಿಸಿದರು.

ಉಡುಪಿ ಜಿಲ್ಲಾ ಪದವಿ ಪೂರ್ವ ವಿಭಾಗದ ಜೀವಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಡಾ. ವಿಶಾಲಾಕ್ಷಿ ಹೆಗ್ಡೆ ವಂದಿಸಿದರು. ಭಾಗ್ಯಶ್ರೀ ಐತಾಳ್ ನಿರೂಪಿಸಿದರು.

ಕಾರ್ಯಕ್ರಮದ ಪ್ರಮುಖ ಅಂಗವಾಗಿ ನಿಟ್ಟೆ ಬಯೋಟೆಕ್ನಾಲಜಿ ವಿಭಾಗದ ಅಸೋಸಿಯೇಟ್ ಪ್ರೋಫೆಸರ್ ಡಾ.ಶ್ಯಾಮಪ್ರಸಾದ್ ಸಜಂಕಿಲ ಅವರಿಂದ ಜೈವಿಕ ತಂತ್ರಜ್ಞಾನ ಅನ್ವಯಗಳು ವಿಷಯದ ಬಗ್ಗೆ ಉಪನ್ಯಾಸ ನಡೆಯಿತು. ಬದಲಾದ ಪ್ರಾಯೋಗಿಕ ಪರೀಕ್ಷೆ ಹಾಗೂ ಪಠ್ಯಕ್ರಮದ ಬಗ್ಗೆ ಮಲ್ಪೆ ಸರಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲ ವರ್ಗೀಸ್ ಪಿ. ಚರ್ಚಿಸಿದರು.