ಉಡುಪಿ ಜಿಲ್ಲೆಯಾದ್ಯಂತ ಭಾರೀ ವರ್ಷಾಧಾರೆ: ಉಕ್ಕಿ ಹರಿಯುತ್ತಿರುವ ಸ್ವರ್ಣ, ಪಾಪನಾಶಿನಿ ನದಿಗಳು: ನದಿ ತೀರದ ಪ್ರದೇಶದಲ್ಲಿ ನೆರೆಯ ಭೀತಿ

ಉಡುಪಿ: ಜಿಲ್ಲೆಯಾದ್ಯಂತ ಕಳೆದ ಐದು ದಿನದಿಂದ ಭಾರೀ ವರ್ಷಾಧಾರೆಯಾಗುತ್ತಿದ್ದು, ಇದರಿಂದ ನದಿ ಪಾತ್ರದ ಪ್ರದೇಶಗಳು ಮುಳುಗಡೆಯಾಗಿವೆ.
ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಪಾಪನಾಶಿನಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಲ್ಲಿ ನೆರೆ ಭೀತಿ ಎದುರಾಗಿದೆ. ಪಾಪನಾಶಿನಿ ನದಿಗೆ ಹೊಂದಿಕೊಂಡಿರುವ ಉದ್ಯಾವರ, ಮಟ್ಟು ಪ್ರದೇಶದಲ್ಲಿ ನೆರೆ ಬಂದಿದ್ದು, ಜನಜೀವನಕ್ಕೆ ತೊಂದರೆಯಾಗಿದೆ. ಉದ್ಯಾವರದ ಮಠದ ಕುದ್ರುವಿನ ಅದಮಾರು ಮಠಕ್ಕೆ ಸೇರಿದ ಜಮೀನಿನಲ್ಲಿದ್ದ 21 ಹಸುಗಳನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲಾಗಿದೆ. ದೋಣೆ ಹಾಗೂ ಟೆಂಪೋದ ಮೂಲಕ ಹಸುಗಳನ್ನು ಸಾಗಿಸಲಾಗಿದೆ.
ಸ್ವರ್ಣನದಿಯೂ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಇದರಿಂದ ಪೆರಂಪಳ್ಳಿ, ಬಲೇಕುದ್ರು ಪ್ರದೇಶದಲ್ಲಿ ನೆರೆಯ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ನದಿ ಪಾತ್ರದ ನಿವಾಸಿಗಳನ್ನು ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ನೇತೃತ್ವದಲ್ಲಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.