ಕೋಟ: ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಹಾಗೂ ಕುಂದಾಪುರ ಮಹಿಳಾ ಮೋರ್ಚಾ ವತಿಯಿಂದ ನರೇಂದ್ರ ಮೋದಿ ಅವರ 71ನೇ ಜನ್ಮದಿನದ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಅಭಿಯಾನದ ಅಂಗವಾಗಿ ಪ್ರಸಾದ್ ನೇತ್ರಾಲಯ ಹಾಗೂ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಮತ್ತು ಎಸ್ಸಿಲರ್ ವಿಷನ್ ಪೌಂಡೇಷನ್ ಇವರ ಸಹಯೋಗದಲ್ಲಿ ಸೆ. 17ರಂದು ಕೋಟ ಮಾಂಗಲ್ಯ ಮಂದಿರದಲ್ಲಿ ನಡೆದ ಯಶಸ್ವಿ ನೇತ್ರ ತಪಾಸಣಾ ಶಿಬಿರದಲ್ಲಿ ಆಯ್ದ 293 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಮಂಗಳವಾರ ಕೋಟ ಮಾಂಗಲ್ಯ ಮಂದಿರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಅವರು, ಪ್ರಧಾನಿ ನರೇಂದ್ರಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿಯಿಂದ ದೇಶಾದ್ಯಂತ ಇಂತಹ ಅನೇಕ ಸೇವಾಕಾರ್ಯ ನಡೆದಿದೆ. ಅದರಲ್ಲಿ ಕುಂದಾಪುರ ಮಂಡಲದಲ್ಲಿ ಜರುಗಿದ ಈ ನೇತ್ರ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ಹಲವಾರು ಜನರಿಗೆ ದೃಷ್ಠಿ ನೀಡುವ ಹೆಮ್ಮೆಯ ಕಾರ್ಯಕ್ರಮ ಮತ್ತು ರಾಜ್ಯಕ್ಕೆ ಮಾದರಿಯಾದುದು ಎಂದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್ ಶೆಟ್ಟಿ ಮಾತನಾಡಿ, ಮಹಿಳಾ ಮೋರ್ಚಾ ಜಿಲ್ಲೆಯಾದ್ಯಂತ ಮೊದಲಿಂದಲೂ ಜನಪರ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದು ಇಂದು ಈ ಕಾರ್ಯಕ್ರಮವು ಕೂಡ ಜನಸೇವೆಗೆ ಮಾದರಿಯಾಗಿ ಮಾಡಿದ್ದೇವೆ ಎಂದು ಉಲ್ಲೇಖಿಸಿ ಕನ್ನಡಕದ ಬಳಕೆ ಮತ್ತು ಕಣ್ಣಿನ ಸುರಕ್ಷತೆಯ ಕುರಿತಾಗಿ ವಿವರಿಸಿದರು.
ಮಹಿಳಾ ಮೋರ್ಚಾ ಕುಂದಾಪುರ ಅಧ್ಯಕ್ಷೆ ರೂಪಾ ಪೈ ಅಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ಮಂಡಲ ಅಧ್ಯಕ್ಷ ಶಂಕರ ಅಂಕದಕಟ್ಟೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜ್ಯಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ. ಬಿ. ಶೆಟ್ಟಿ, ಕೋಟ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಅಜಿತ್ ಕೊತ್ತಾಡಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಲತಾ ಹೆಗ್ಡೆ, ಕೋಟತಟ್ಟು ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಉಪಸ್ಥಿತರಿದ್ದರು.
ಕುಂದಾಪುರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸೌರಭಿ ಪೈ ನಿರೂಪಿಸಿ, ಅನಿತಾ ಶ್ರೀಧರ್ ವಂದಿಸಿದರು, ಕಾರ್ಯದರ್ಶಿ ರೋಹಿಣಿ ಪೈ ವಂದೇ ಮಾತರಂ ಹಾಡಿದರು.