ಉಡುಪಿ: 252ನೆಯ ಪರ್ಯಾಯದ ಮಹೋತ್ಸವದಲ್ಲಿ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ನಾಲ್ಕನೇ ಬಾರಿಗೆ ಪರ್ಯಾಯಕ್ಕೆ ಅಣಿಯಾಗುತ್ತಿದ್ದಾರೆ. ಜ. 18 ರ ಬೆಳಗ್ಗೆ ಪರ್ಯಾಯ ಮೆರವಣಿಗೆ ಹಾಗೂ ದರ್ಬಾರ್ ನಡೆಯಲಿದ್ದು, ಬುಧವಾರ ಬೆಳಗ್ಗೆ ಭಕ್ತರು ನಗರಕ್ಕೆ ಆಗಮಿಸುತ್ತಿದ್ದು, ಹಬ್ಬದ ಸಂಭ್ರಮ ಕಳೆಗಟ್ಟಿದೆ.
ನಗರದ ಎಲ್ಲಾ ರಸ್ತೆಗಳೂ ಶ್ರೀಕೃಷ್ಣನ ಮಠದತ್ತ ಮುಖಮಾಡಿದ್ದು, ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಿಕೊಂಡಿದೆ. ಕಾಪು ದಂಡತೀರ್ಥದಿಂದ ಉಡುಪಿವರೆಗಿನ ರಾಷ್ಟ್ರೀಯ ಹೆದ್ದಾರಿ, ಉಡುಪಿ ನಗರದೊಳಗಿನ ಎಲ್ಲ ರಸ್ತೆಗಳೂ ಝಗಮಗಿಸುತ್ತಿದ್ದು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.
Anna Brahma Kshetra – Rajathapeetapura/Udupi fully decked up for historic 4th Udupi Sri Krishna Paryayotsava of HH Sri Sugunendra Theertharu tonight & ascend Sarvajnapeeta at 5:42AM on Jan 18th'24
— SriPuthigeMatha (@PuthigeSri) January 17, 2024
Official video released by Bhavi Paryaya Matha – Sri Puthige Matha on Udupi pic.twitter.com/UltqY9JzLn
ಮಧ್ಯರಾತ್ರಿ 1.30ಕ್ಕೆ ದಂಡತೀರ್ಥ ಮಠದಲ್ಲಿ ತೀರ್ಥಸ್ನಾನ ಮಾಡಿ ಪರ್ಯಾಯ ಶ್ರೀಗಳು ಪ್ರಾತಃಕಾಲ 2 ಗಂಟೆಗೆ ಉಡುಪಿ ಜೋಡುಕಟ್ಟೆಗೆ ಆಗಮಿಸಲಿದ್ದಾರೆ. ಮಠದ ಪಟ್ಟದ ದೇವರನ್ನು ಚಿನ್ನದ ಪಲ್ಲಕ್ಕಿಯಲ್ಲಿ ಇರಿಸಿಕೊಂಡು ಅದರ ಹಿಂದೆ ಪುಷ್ಪಾಲಂಕೃತ ಮೆರವಣಿಗೆಯಲ್ಲಿ ಪೇಟವನ್ನು ಧರಿಸಿ ಪರ್ಯಾಯ ಪೀಠಾರೂಢರಾಗುವ ಸ್ವಾಮೀಜಿಯವರು ರಥಬೀದಿಯತ್ತ ತೆರಳಲಿದ್ದಾರೆ. ಪ್ರಾತಃಕಾಲ 4.30ಕ್ಕೆ ರಥಬೀದಿಯ ಪ್ರವೇಶದ್ವಾರದಲ್ಲಿ ಇಳಿದು ಕನಕನ ಕಿಂಡಿಯ ಮೂಲಕ ದೇವರ ದರ್ಶನ ಪಡೆದು ನವಗ್ರಹದಾನ ಪ್ರದಾನ ಮಾಡಿ ಅಲ್ಲಿಂದ ಶ್ರೀಚಂದ್ರಮೌಳೀಶ್ವರ, ಶ್ರೀಅನಂತೇಶ್ವರ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಮಾಡಿ ಶ್ರೀಕೃಷ್ಣಮಠವನ್ನು ಪ್ರವೇಶಿಸಲಿದ್ದಾರೆ.
ಮಧ್ವಸರೋವರದಲ್ಲಿ ಪಾದ ಪ್ರಕ್ಷಾಳನ ಮಾಡಿ ಶ್ರೀಕೃಷ್ಣ, ಮುಖ್ಯಪ್ರಾಣ, ಮಧ್ವಾಚಾರ್ಯರ ದರ್ಶನ ಮಾಡಲಿದ್ದಾರೆ. 5.50ಕ್ಕೆ ಮಧ್ವಾಚಾರ್ಯರ ಕಾಲದಿಂದ ಬಂದ ಅಕ್ಷಯಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠಾರೋಹಣ ಮಾಡಲಿದ್ದಾರೆ. ಬೆಳಗ್ಗೆ 6 ಗಂಟೆಗೆ ಬಡಗುಮಾಳಿಗೆಯಲ್ಲಿ ಗಂಧದ್ಯುಪಚಾರ, 6.30ಕ್ಕೆ ರಾಜಾಂಗಣದಲ್ಲಿ ನಡೆಯುವ ಪರ್ಯಾಯ ದರ್ಬಾರ್ ಸಭೆಯಲ್ಲಿ ಪಾಲ್ಗೊಂಡು ಅನುಗ್ರಹ ಸಂದೇಶ ನೀಡಲಿದ್ದಾರೆ.
ಬೆಳಗ್ಗೆ 10.30ಕ್ಕೆ ಚತುರ್ಥ ಪರ್ಯಾಯದ ಪ್ರಥಮ ಮಹಾಪೂಜೆಯನ್ನು ನೆರವೇರಿಸಲಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಸಂಜೆಯ ದರ್ಬಾರ್ ಸಭೆ 4.30ಕ್ಕೆ ನಡೆಯಲಿದೆ. ರಾತ್ರಿ ಬ್ರಹ್ಮರಥೋತ್ಸವ, ಜ. 19ರಂದು ಸೌರ ಮಧ್ವನವಮಿ ಆಚರಣೆ ನಡೆಯಲಿದೆ. ಜ. 18 ರಿಂದ 24ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಸಂಭ್ರಮವನ್ನು ಹೆಚ್ಚಿಸಲಿವೆ.
ಇದೇ ಮೊದಲ ಬಾರಿಗೆ ಪರ್ಯಾಯ ಮೆರವಣಿಗೆಯು ಜೋಡುಕಟ್ಟೆ ಬದಲಾಗಿ ಕಿನ್ನಿಮೂಲ್ಕಿ ಸ್ವಾಗತ ಗೋಪುರದಿಂದ ಹೊರಡಲಿದೆ. ಬುಧವಾರ (ಜ. 17) ಮಧ್ಯರಾತ್ರಿ ಬಳಿಕ 2 ಗಂಟೆಗೆ ಕಿನ್ನಿಮೂಲ್ಕಿ ಸ್ವಾಗತ ಗೋಪುರದ ಬಳಿ ಮೆರವಣಿಗೆಗೆ ಚಾಲನೆ ನೀಡುವರು. ಅಲ್ಲಿಂದ ಸ್ವಾಮೀಜಿಗಳು ಜೋಡುಕಟ್ಟೆಗೆ ಆಗಮಿಸಿ ಸಂಪ್ರದಾಯಪ್ರಕಾರ ವಿಧಿ ವಿಧಾನಗಳನ್ನು ನೆರವೇರಿಸಿ ಮೆರವಣಿಗೆ ಮೂಲಕ ನಗರ ಪ್ರವೇಶ ಮಾಡಲಿದ್ದಾರೆ.
ಇದೇ ಮೊದಲ ಬಾರಿಗೆ ಕಿನ್ನಿಮೂಲ್ಕಿಯಿಂದ ಪರ್ಯಾಯ ಮೆರವಣಿಗೆ ಆರಂಭವಾಗುತ್ತಿದೆ. ತಮ್ಮ 2ನೇ ಪರ್ಯಾಯ ಸಂದರ್ಭದಲ್ಲಿ ಗುರುಗಳಾದ ಶ್ರೀ ಸುಧೀಂದ್ರತೀರ್ಥ ಶ್ರೀಪಾದರ ಸ್ಮರಣಾರ್ಥ ಕಿನ್ನಿಮೂಲ್ಕಿಯಲ್ಲಿ ಸ್ವಾಗತಗೋಪುರವನ್ನು ಪುತ್ತಿಗೆ ಶ್ರೀಗಳು ನಿರ್ಮಿಸಿದ್ದರು. ಈ ಬಾರಿ ಪರ್ಯಾಯದಲ್ಲಿ ಭಗವದ್ಗೀತೆ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ಸ್ತಬ್ಧಚಿತ್ರಗಳಿದ್ದು ಭಕ್ತರ ಅನುಕೂಲಕ್ಕಾಗಿ ಈ ಮಾರ್ಪಾಡು ಮಾಡಲಾಗಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ತಿಳಿಸಿದೆ.

ಮೆರವಣಿಗೆಯಲ್ಲಿ ಹುಲಿವೇಷ, ವಿವಿಧ ಜನಪದ ಕಲಾ ತಂಡಗಳು, ಭಜನಾ ತಂಡಗಳು, ಕಂಬಳದ ಕೋಣ, ಪರಶುರಾಮ, ಅಯೋಧ್ಯಾ ರಾಮಮಂದಿರದಂತಹ ಸ್ತಬ್ಧಚಿತ್ರಗಳು ಇರಲಿವೆ.
ಉತ್ಸವದಲ್ಲಿ ಸುಮಾರು ಒಂದು ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಗುರುವಾರ ಮಧ್ಯಾಹ್ನದ ಭೋಜನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅನ್ನ, ಸಾರು, ಮಟ್ಟು ಗುಳ್ಳದ ಸಾಂಬಾರು, ಸುವರ್ಣಗಡ್ಡೆ ಪಲ್ಯ, ಪಾಯಸ, ಹಯಗ್ರೀವ ಮಡ್ಡಿ, ಮೈಸೂರು ಪಾಕ್, ಕಡಿ, ಜಿಲೇಬಿ, ಸಾಟು, ಮೋಹನಲಾಡು ಮೃಷ್ಟಾನದ ಸವಿ ಇರಲಿದೆ.
ವಿದೇಶಗಳಿಂದ ಅತಿಥಿಗಳು ಆಗಮಿಸುತ್ತಿದ್ದು, ಸುಮಾರು 300 ಮಂದಿ ವಿದೇಶಿಗರು ಪಾಲ್ಗೊಳ್ಳುವ ಸಂಭವವಿದೆ. ಗುರುವಾರ ಬೆಳಗ್ಗೆ ಮತ್ತು ಸಂಜೆಯ ದರ್ಬಾರ್ ಕಾರ್ಯಕ್ರಮದಲ್ಲಿ ದರ್ಬಾರ್ ಸಮ್ಮಾನವಲ್ಲದೆ ಕೃಷ್ಣಾನುಗ್ರಹ ಪ್ರಶಸ್ತಿ ಸಹಿತ ಸುಮಾರು 20 ಮಂದಿ ಗಣ್ಯರನ್ನು ಗೌರವಿಸಲಾಗುವುದು ಎಂದು ಸಮಿತಿ ತಿಳಿಸಿದೆ.












