ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜದ ಗೌರವ ಕಾಪಾಡಲು ಜಿಲ್ಲಾಧಿಕಾರಿ ಸೂಚನೆ

ಉಡುಪಿ : ಹರ್ ಘರ್ ತಿರಂಗಾ ಕಾರ್ಯಕ್ರಮವು ಕೇಂದ್ರ ಸರ್ಕಾರದ ರಾಷ್ಟ್ರಾಭಿಮಾನ ಬಿಂಬಿಸುವ ವಿಶೇಷ ಕಾರ್ಯಕ್ರಮವಾಗಿದ್ದು, ಆಗಸ್ಟ್ 13 ರಿಂದ 15 ರವರೆಗೆ ಎಲ್ಲಾ ಸರ್ಕಾರಿ ಕಚೇರಿಗಳು ಸೇರಿದಂತೆ ಮನೆ ಮನೆ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಾಭಿಮಾನವನ್ನು ಮೆರೆಯಲು ಹಾಗೂ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಕೋರಿದೆ.

ಸಾರ್ವಜನಿಕರು ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಆಗಸ್ಟ್ 13 ರ ಬೆಳಗ್ಗೆ ಧ್ವಜಾರೋಹಣ ನಡೆಸಿ, ಆ.15 ರ ಸಂಜೆ ಧ್ವಜ ಅವರೋಹಣ ಮಾಡಿ, ನಂತರ ಧ್ವಜವನ್ನು ಸುರಕ್ಷಿತವಾಗಿ ತಮ್ಮ ಮನೆಗಳಲ್ಲಿಯೇ ಗೌರವಪೂರ್ವಕವಾಗಿ ಇಟ್ಟುಕೊಳ್ಳಬೇಕು.

ಎಲ್ಲಾ ಸರ್ಕಾರಿ ಕಚೇರಿ, ಶಾಲಾ – ಕಾಲೇಜುಗಳ ಧ್ವಜಸ್ಥಂಭಗಳಲ್ಲಿ ಆಗಸ್ಟ್ 13 ರಿಂದ 15 ರ ವರೆಗೆ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ ಮಾಡಿ ಸಂಜೆ 6 ಗಂಟೆಗೆ ಧ್ವಜಾವರೋಹಣ ಮಾಡಬೇಕು. ಧ್ವಜಾರೋಹಣ ಸಮಯದಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.