ಉಡುಪಿ: ಕೋವಿಡ್ ನಿಯಮ ಉಲ್ಲಂಘಿಸಿದ ನಾಲ್ಕು ಅಂಗಡಿಗಳಿಗೆ ತಲಾ ₹5 ಸಾವಿರ ದಂಡ ವಿಧಿಸಿದ ಡಿಸಿ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಸ್ವತಃ ದಿಢೀರ್ ಆಗಿ ಕಾರ್ಯಾಚರಣೆಗೆ ಇಳಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು, ಕೋವಿಡ್ ನಿಯಮ ಉಲ್ಲಂಘಿಸಿದ ನಗರದ ನಾಲ್ಕು ಅಂಗಡಿಗಳಿಗೆ ತಲಾ ₹5 ಸಾವಿರ ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ಅಲ್ಲದೆ, ಕೋವಿಡ್ ನಿಯಮ ಉಲ್ಲಂಘಿಸುವವರಿಗೆ ಯಾವುದೇ ಕಾರಣಕ್ಕೂ ಕ್ಷಮೆ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆಕೊಟ್ಟರು.

ಕೋವಿಡ್ ನಿಯಮಗಳನ್ನು ಜನರು ಸರಿಯಾಗಿ ಪಾಲಿಸಿದರೆ, ಯಾವುದೇ ಲಾಕ್ ಡೌನ್ ಮಾಡುವ ಅನಿವಾರ್ಯತೆ ಎದುರಾಗುವುದಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿದೆ ಎಂದರು.

ಗ್ರಾಹಕರು ಅಂಗಡಿಗೆ ಪ್ರವೇಶ ಮಾಡುವ ಮೊದಲು ಮಾಸ್ಕ್ ಧರಿಸಿಕೊಂಡೆ ಬರುವಂತೆ ಅಂಗಡಿ ಮಾಲೀಕರು ಸೂಚಿಸಬೇಕು. ಮಾಸ್ಕ್ ಹಾಕದವರಿಗೆ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.

ಅದರಂತೆ ಕೋವಿಡ್ ನಿಯಮ ಉಲ್ಲಂಘಿಸುವ ಅಂಗಡಿಗಳಿಗೆ ₹5 ಸಾವಿರ ಹಾಗೂ ಸಾರ್ವಜನಿಕರಿಗೆ ₹100 ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅನುಮತಿ ಇಲ್ಲದೆ ಯಾವುದೇ ಖಾಸಗಿ, ಸಾರ್ವಜನಿಕ, ಧಾರ್ಮಿಕ , ರಾಜಕೀಯ ಸಮಾರಂಭಗಳನ್ನು ಆಯೋಜಿಸುವಂತಿಲ್ಲ. ಸರ್ಕಾರ ನಿಗದಿ ಪಡಿಸಿರುವ ಸಂಖ್ಯೆಯಷ್ಟೇ ಜನರು ಸಭೆ, ಸಮಾರಂಭಗಳಲ್ಲಿ ಭಾಗವಹಿಸಬೇಕು. ಹಾಗೆ ಕಾರ್ಯಕ್ರಮಗಳಿಗೆ ಅನುಮತಿ ನೀಡುವಾಗ ತಹಶೀಲ್ದಾರರು ನಿರ್ದಿಷ್ಟ ಸಮಾರಂಭದ ಉಸ್ತುವಾರಿ ಯಾರೆಂಬುವುದನ್ನು ಪರಿಶೀಲಿಸಬೇಕು. ಒಂದು ವೇಳೆ ಅಧಿಕಾರಿಗಳು ತಮ್ಮ ಕಾರ್ಯ ನಿರ್ವಹಿಸುವಲ್ಲಿ ವಿಫಲರಾದರೆ, ಅಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು ಈ ಹಿಂದೆ ಕೊರೊನಾ ಅವಧಿಯಲ್ಲಿ ಪಾಲಿಸಿದ ಕಟ್ಟುನಿಟ್ಟಿನ ಕ್ರಮಗಳನ್ನು ಈಗಲೂ ಅನುಸರಿಸಬೇಕು. ಮನೆಯಿಂದ ಹೊರಬರುವಾಗ ಮಾಸ್ಕ್ ಹಾಕಿಕೊಂಡೆ ಬರಬೇಕು ಎಂದರು.

ದಂಡದ ಜತೆ ಕ್ರಿಮಿನಲ್ ಕೇಸ್:
ಮುಂದಿನ ದಿನಗಳಲ್ಲಿ ಕೋವಿಡ್ ನಿಯಮವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವ ಜೊತೆಗೆ ಕ್ರಿಮಿನಲ್ ಪ್ರಕರಣವನ್ನು ಸಹ ದಾಖಲಿಸಲಾಗುತ್ತದೆ ಎಚ್ಚರಿಕೆ ನೀಡಿದರು.