ಉಡುಪಿ ಮಾ.10: ಮಾರ್ಚ್ 29 ರಂದು ನಡೆಯುವ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 2668 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಟಿ.ಇ.ಟಿ ಪರೀಕ್ಷೆಯ ಸಿದ್ದತೆಗಳ ಕುರಿತು ಪೂರ್ವಾಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕರ ಅರ್ಹತಾ ಪರೀಕ್ಷೆಯ ಅಧಿವೇಶನ 1 ರ ಪರೀಕ್ಷೆಗೆ 858 ವಿದ್ಯಾರ್ಥಿಗಳು ಮತ್ತು ಅಧಿವೇಶನ 2 ರ ಪರೀಕ್ಷೆಗೆ 1810 ವಿದ್ಯಾರ್ಥಿಗಳು, ಒಟ್ಟು 2668 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಇದಕ್ಕಾಗಿ ಮಣಿಪಾಲ ಪದವಿ ಪೂರ್ವ ಕಾಲೇಜು, ಯು. ಕಮಲಾ ಬಾಯಿ ಪ್ರೌಢಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜು, ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಸರಕಾರಿ ಪ್ರೌಢಶಾಲೆ ವಳಕಾಡು ಮತ್ತು ಸೈಂಟ್ ಸಿಸಿಲಿಸ್ ಪ್ರೌಢಶಾಲೆಗಳು ಪರೀಕ್ಷೆ ಕೇಂದ್ರಗಳಾಗಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಪರೀಕ್ಷೆ ನಡೆಸುವಲ್ಲಿ ಸಮಸ್ಯೆಗಳಾಗದಂತೆ ಮತ್ತು ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು.
ಪ್ರಶ್ನೆ ಪತ್ರಿಕೆ ಸ್ವೀಕರಿಸಲು ಪ್ರತಿ ಪರೀಕ್ಷಾ ಕೇಂದ್ರಕ್ಕೂ ಮುಖ್ಯ ಅಧೀಕ್ಷಕರು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, ಪರೀಕ್ಷಾ ಕೊಠಡಿ ವೀಕ್ಷಕರು, ಕೊಠಡಿ ಮೇಲ್ವಿಚಾರಕರು, ವೀಡಿಯೋ ಗ್ರಾಫರ್‍ಗಳು, ಮೂರು ಕೇಂದ್ರಗಳಿಗೆ ಒಬ್ಬರಂತೆ ಇಬ್ಬರು ಮಾರ್ಗಾಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಗಳನ್ನು ಒಳಗೊಂಡಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶೇಷಶಯನ ಕಾರಿಂಜ ಮಾಹಿತಿ ನೀಡಿದರು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸುವಂತೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ಭದ್ರತೆ ಒದಗಿಸುವಂತೆ ಪೋಲೀಸ್ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಮತ್ತು ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.












