ಕೋಟ: ರಾ.ಹೆ 66 ರಲ್ಲಿ ಅಪಘಾತ ತಡೆಗೆ ಉಡುಪಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರಿಂದ ಕಾರ್ಯಾಚರಣೆ

ಕೋಟ: ರಾ.ಹೆ 66 ರಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚಾಗುತ್ತಿದ್ದು, ಅಪಘಾತದಿಂದ ಜೀವಹಾನಿ ಸಂಭವಿಸಿದಲ್ಲಿ ಇದಕ್ಕೆ ರಾ.ಹೆ ನಿರ್ಮಾಣದ ಗುತ್ತಿಗೆದಾರರಾದ ನವಯುಗ ಕಂಪನಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಮತ್ತು ಪೊಲೀಸ್ ಅಧೀಕ್ಷಕ ಅಕ್ಷಯ್ ಮಚ್ಚೀಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅವರು ಗುರುವಾರದಂದು ಕೋಟ ಅಮೃತೇಶ್ವರಿ ದೇವಸ್ಥಾನದ ಜಂಕ್ಷನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರಸ್ತೆ ಅಪಘಾತಗಳ ಕುರಿತು ರಾ.ಹೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಪಘಾತ ನಿಯಂತ್ರಿಸಲು ಅನುಸರಿಸಬೇಕಾದ ನಿಯಮಗಳನ್ನು ಕಡ್ಡಾಯವಾಗಿ
ಜಾರಿಗೊಳಿಸುವಂತೆ ಸೂಚಿಸಿದರು.

ಗುತ್ತಿಗೆದಾರರು ಹೆದ್ದಾರಿಗಳ ಅಸಮರ್ಪಕ ನಿರ್ವಹಣೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ, ನವಯುಗ ಕಂಪನಿಗೆ ಅಪಘಾತಗಳನ್ನು ತಪ್ಪಿಸಲು ಬೇಕಾಗಿರುವ ಎಲ್ಲ ಕಾಮಗಾರಿಗಳನ್ನು ಹಾಗೂ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸೂಚಿಸಿ, ಮುಂದೆ ಅಪಘಾತ ನಡೆದಲ್ಲಿ ಕಂಪನಿಯನ್ನು ಹೊಣೆಗಾರರನ್ನಾಗಿಸಿ ಪರಿಹಾರವನ್ನು ಅವರಿಂದಲೇ ವಸೂಲು ಮಾಡುವ ಬಗ್ಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕುಂದಾಪುರ ತಹಶೀಲ್ದಾರ್ ರಾಜಶೇಖರ ಮೂರ್ತಿ, ನವಯುಗ ಕಂಪನಿಯ ಇಂಜಿನಿಯರ್ ಕಿರಣ್, ಟೋಲ್ ಮ್ಯಾನೇಜರ್ ಬಶೀರ್, ಪಿ.ಆರ್.ಓ ಯೋಗೀಶ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಉಪಸ್ಥಿತರಿದ್ದರು.