ಉಡುಪಿ: ಬಿ.ಆರ್.ಶೆಟ್ಟಿ ಆಸ್ಪತ್ರೆಯ ನೌಕರರ ವಜಾಕ್ಕೆ ದಸಂಸ ಖಂಡನೆ; ಮರುನೇಮಕಕ್ಕೆ ಒತ್ತಾಯ

ಉಡುಪಿ: ಬಿ.ಆರ್.ಶೆಟ್ಟಿ ಆಸ್ಪತ್ರೆಯಲ್ಲಿ 5 ತಿಂಗಳಿಂದ ವೇತನ ಕೊಡದೇ ದುಡಿಸಿಕೊಂಡು ನಂತರ ನೌಕರರನ್ನು ನೌಕರಿಯಿಂದ ವಜಾ ಗೊಳಿಸಿದ ಕ್ರಮವನ್ನು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತೀವ್ರವಾಗಿ ಖಂಡಿಸುತ್ತದೆ‌.

ಆಸ್ಪತ್ರೆಯ ಆಡಳಿತ ಮಂಡಳಿ ತಕ್ಷಣವೇ ವಜಾಗೊಳಿಸಿದ ನೌಕರರನ್ನು ವಾಪಾಸ್ ನೌಕರಿಗೆ ಸೇರಿಸಿಕೊಂಡು ಬಾಕಿ ವೇತನವನ್ನು ಪಾವತಿಸಬೇಕು. ಜಿಲ್ಲಾಧಿಕಾರಿ ಅವರು ಈ ಕೂಡಲೇ ಮಧ್ಯೆ ಪ್ರವೇಶಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಒತ್ತಾಯಿಸಿದ್ದಾರೆ.

ಇಂದು ಸಂತ್ರಸ್ತ ನೌಕರರನ್ನು ಸ್ಥಳದಲ್ಲಿ ಭೇಟಿಯಾಗಿ ಧೈರ್ಯ ತುಂಬಿ ಮನವಿ ಸ್ವೀಕರಿಸಿದ ಸುಂದರ ಮಾಸ್ತರ್ ಅವರು, ಬಳಿಕ ಜಿಲ್ಲಾಧಿಕಾರಿಯವರ ಬಳಿ ಫೋನಿನಲ್ಲಿ ಸಮಾಲೋಚನೆ ನಡೆಸಿ ಸೂಕ್ತ ನ್ಯಾಯ ಒದಗಿಸಲು ಒತ್ತಾಯಿಸಿದರು.

ಈ ಕೂಡಲೇ ವಜಾಗೊಂಡ ಬಿ.ಆರ್‌.ಶೆಟ್ಟಿ ಆಸ್ಪತ್ರೆಯ ನೌಕರರಿಗೆ ಸೂಕ್ತ ನ್ಯಾಯ ಒದಗಿಸಿದೇ ಇದ್ದರೇ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸೂಕ್ತ ಹೋರಾಟದ ಹಾದಿ ಹಿಡಿದು ಉಗ್ರ ಪ್ರತಿಭಟನೆಗೆ ಇಳಿಯಬೇಕಾದೀತು ಎಂದು ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ , ಪರಮೇಶ್ವರ ಉಪ್ಪೂರು , ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು , ಮಂಜುನಾಥ ಬಾಳ್ಕುದ್ರು , ಶ್ಯಾಮಸುಂದರ ತೆಕ್ಕಟ್ಟೆ , ಶ್ರೀಧರ , ಅಣ್ಣಪ್ಪ ನಕ್ರೆ , ತಾಲೂಕು ಸಂಚಾಲಕರಾದ ಶಂಕರ್ ದಾಸ್ ಚೆಂಡ್ಕಳ , ವಿಠಲ ಉಚ್ಚಿಲ , ಶ್ರೀನಿವಾಸ ವಡ್ಡರ್ಸೆ , ದೇವು ಹೆಬ್ರಿ , ನಾಗರಾಜ ಕುಂದಾಪುರ , ರಾಘವ ಕುಕುಜೆ ಅವರು ಎಚ್ಚರಿಕೆ ನೀಡಿದ್ದಾರೆ.