ಉಡುಪಿ: ದಲಿತ ಹೋರಾಟಗಾರ, ಸಮಾಜ ಸೇವಕ ಸುಂದರ್ ಕಪ್ಪೆಟ್ಟು ಕೊರೊನಾದಿಂದ ನಿಧನ

ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಸಂಘಟನಾ ಸಂಚಾಲಕ, ಭಾರತೀಯ ಜೀವವಿಮಾ ನಿಗಮದ ಕುಂದಾಪುರ ಶಾಖೆಯ ಉದ್ಯೋಗಿ ಸುಂದರ್ ಕಪ್ಪೆಟ್ಟು (52) ಅವರು ಕೋವಿಡ್ 19 ಸೋಂಕಿನಿಂದ ಇಂದು ನಿಧನ ಹೊಂದಿದರು.

ಅವರಿಗೆ ಕೆಲವು ದಿನಗಳ‌ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಸುಂದರ್ ಕಪ್ಪೆಟ್ಟು ಅವರು ಹಲವಾರು ದಲಿತ ಹೋರಾಟ ಹಾಗೂ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಅಲ್ಲದೆ, ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು. ಅವರು ಪತ್ನಿ, ಎರಡು ಪುತ್ರಿ, ಒರ್ವ ಪುತ್ರನನ್ನು ಅಗಲಿದ್ದಾರೆ.