ಉಡುಪಿ: ಕೊರೊನಾ ಸೋಂಕಿನಲ್ಲಿ ಮತ್ತೆ ಏರಿಕೆ; ಐವರು ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಮತ್ತೆ ಕೊರೊನಾ ಏರಿಕೆಕಂಡಿದ್ದು, 973 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕಿನಲ್ಲಿ 353, ಕುಂದಾಪುರ ತಾಲೂಕಿನಲ್ಲಿ 340, ಕಾರ್ಕಳ ತಾಲೂಕಿನಲ್ಲಿ‌ 273 ಹಾಗೂ ಹೊರ ಜಿಲ್ಲೆಯ ಏಳು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 5866 ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಇಂದು ಕೂಡ 5 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಉಡುಪಿ ತಾಲೂಕಿನ 55 ವರ್ಷದ ವ್ಯಕ್ತಿ, 56 ವರ್ಷದ ವ್ಯಕ್ತಿ, 70 ವರ್ಷದ ವೃದ್ಧೆ ಹಾಗೂ ಕುಂದಾಪುರ ತಾಲೂಕಿನ 97 ಹಾಗೂ 80 ವರ್ಷದ ಇಬ್ಬರು ವೃದ್ಧರು ಮೃತಪಟ್ಟಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 315 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಮೇ 25ರಂದು ಜಿಲ್ಲೆಯಲ್ಲಿ 894 ಮಂದಿ ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಆ ಮೂಲಕ ಕೋವಿಡ್ ಎರಡನೇ ಅಲೆಯಲ್ಲಿ ಈವರೆಗೆ ಒಟ್ಟು 25599 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 207453 ಮಂದಿಯನ್ನು ಕೋವಿಡ್ ಟೆಸ್ಟ್ ಗೆ ಒಳಪಡಿಸಿದ್ದು, ಈ ಪೈಕಿ 31,590 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಒರ್ವ ಬ್ಲ್ಯಾಕ್ ಫಂಗಸ್ ಸೋಂಕಿತ ಪತ್ತೆ:

ಇಂದು ಕುಂದಾಪುರ ತಾಲೂಕಿನ ಒಬ್ಬರಿಗೆ ಬ್ಲ್ಯಾಕ್ ಫಂಗಸ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ
ಜಿಲ್ಲೆಯಲ್ಲಿ 12 ಮಂದಿ ಬ್ಲಾಕ್ ಫಂಗಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿಯಲ್ಲಿ 2, ಕುಂದಾಪುರದಲ್ಲಿ 2 ಹಾಗೂ ಹೊರ ಜಿಲ್ಲೆಯ 9 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಉಡುಪಿ ತಾಲೂಕಿನ ಓರ್ವ ವ್ಯಕ್ತಿ ಈಗಾಗಲೇ ಬ್ಲ್ಯಾಕ್ ಫಂಗಸ್ ನಿಂದ ಮೃತಪಟ್ಟಿದ್ದಾರೆ