ಉಡುಪಿ: ಶಂಕಿತ ಕೊರೊನಾ ಸೋಂಕಿತರ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಒಂದೇ ದಿನ 16 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಹೆಚ್ಚಿನ ಶಂಕಿತರು ಆಸ್ಪತ್ರೆಗೆ ದಾಖಲಾಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಜಪಾನ್, ಸೌದಿ ಅರೇಬಿಯಾ, ಸಿಂಗಪುರ, ಮಸ್ಕತ್, ಅಬುದಾಬಿ, ಮುಂಭೈ, ತೆಲಂಗಾಣದಿಂದ ಈಚೆಗೆ ಜಿಲ್ಲೆಗೆ ಮರಳಿದ್ದ 10 ಹಾಗೂ ಸ್ಥಳೀಯರಾದ 6 ಜನರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಶಂಕಿತರಲ್ಲಿ 11 ಪುರುಷರು ಹಾಗೂ ಐವರು ಮಹಿಳೆಯರು ಸೇರಿದ್ದು ಐಸೊಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 26 ಜನರ ವೈದ್ಯಕೀಯ ಪರೀಕ್ಷಾ ವರದಿ ಬರಬೇಕಿದೆ ಎಂದು ಡಿಎಚ್ಒ ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.