ಉಡುಪಿ: ದುಬೈನಿಂದ ಜಿಲ್ಲೆಗೆ ಆಗಮಿಸಿದ ಐದು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಡಿಎಚ್ಒ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಲುಕಿಕೊಂಡಿದ್ದ 176 ಮಂದಿ ಅನಿವಾಸಿಯ ಭಾರತೀಯರು ಮೇ 13ರಂದು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಇವರಲ್ಲಿ ಉಡುಪಿ ಜಿಲ್ಲೆಗೆ ಸೇರಿದ 49 ಮಂದಿಯನ್ನು ಜಿಲ್ಲೆಯ ಹೋಟೆಲ್ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ನಂತರ ಎಲ್ಲರ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು, ಐದು ಮಂದಿಯಲ್ಲಿ ಕೊರೊನಾ ಪಾಸಿಟಿವ್ ಇರುವುದು ಖಚಿತಗೊಂಡಿದೆ ಎಂದು ಮಾಹಿತಿನೀಡಿದ್ದಾರೆ.
ಈ ಐದು ಮಂದಿ ಪಾಸಿಟಿವ್ ರೋಗಿಗಳನ್ನು ಹೋಟೆಲ್ ನಿಂದ ಉಡುಪಿಯ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.