ಕೊರೋನ ನಿಯಂತ್ರಣ ಕ್ರಮ: ಜಿಲ್ಲಾಡಳಿತವನ್ನು ಶ್ಲಾಘಿಸಿದ ಸಚಿವ ಬೊಮ್ಮಾಯಿ

ಉಡುಪಿ ಏ.7:  ಉಡುಪಿ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕುರಿತಂತೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ರಾಜ್ಯದ ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಭಿನಂದಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿ ಅವರೊಂದಿಗೆ , ಜಿಲ್ಲೆಯ ಕೊರೋನಾ ನಿಯಂತ್ರಣ ಕುರಿತು ಕೈಗೊಂಡಿರುವ ಕ್ರಮಗಳು ಮತ್ತು ಜಿಲ್ಲೆಯ ಇತರೆ ಸಮಸ್ಯೆಗಳ  ಕುರಿತು ನಡೆದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳು, ಸಿಇಓ, ಎಸ್ಪಿ, ಅರೋಗ್ಯ ಇಲಾಖೆ ಮತ್ತು ಇತರೆ ಸಂಬಂದಪಟ್ಟ ಎಲ್ಲಾ ಇಲಾಖೆಗಳು ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಸಚಿವ ಬೊಮ್ಮಾಯಿ, ಉಡುಪಿ ಜಿಲ್ಲೆಯ ಪಕ್ಕದ ಜಿಲ್ಲೆಗಳಾದ ದ.ಕನ್ನಡ ಮತ್ತು ಉ.ಕನ್ನಡದಲ್ಲಿ ಕೊರೋನ ಪ್ರಕರಣಗಳು ಹೆಚ್ಚಾಗಿರುವುದರಿಂದ , ಜಿಲ್ಲೆಯ ಗಡಿ ಪ್ರದೇಶವನ್ನು ಹೆಚ್ಚು ಬಿಗಿಗೊಳಿಸುವಂತೆ ಹಾಗೂ ಆ ಜಿಲ್ಲೆಗಳಿಂದ ಅವಶ್ಯಕ ಸಾಮಗ್ರಿ ಸಾಗಿಸುವ ವಾಹನಗಳ ಹೊರತು ಅನಗತ್ಯವಾಗಿ ಸಂಚಾರ ನಡೆಸುವವರನ್ನು ಕಟ್ಟುನಿಟ್ಟಾಗಿ ನಿರ್ಭಂದಿಸುವಂತೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಸೂಚನೆ ನೀಡಿದರು.

ಜಿಲ್ಲೆಯ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ, ಆರೋಗ್ಯ ಇಲಾಖೆಯಿಂದ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ತಪಾಸಣೆ  ನಡೆಸುವಂತೆ ಸೂಚಿಸಿದ ಸಚಿವ ಬೊಮ್ಮಾಯಿ, ನಗರ ಪ್ರದೇಶದಲ್ಲಿ ಸಹ ಆರೋಗ್ಯ ತಪಾಸಣೆ ನಡೆಸಿ, ಈ ಕಾರ್ಯಕ್ಕೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ನೆರವು ಪಡೆಯಿರಿ, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ತಪಾಸಣೆ ನಡೆಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೆಲೆದೋರದಂತೆ ಎಚ್ಚರಿಕೆ ವಹಿಸುವಂತೆ ಹಾಗೂ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ  ಸಚಿವ ಬೊಮ್ಮಾಯಿ  ತಿಳಿಸಿದರು.

ಉಡುಪಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಕ್ರಮ ವಹಿಸಲಾಗಿದೆ ಎಂದು  ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ  ಕುಡಿಯುವ ನೀರು ಸಮಸ್ಯೆ ಕಂಡು ಬರಬಹುದಾದ ಗ್ರಾಮಗಳನ್ನು ಗುರುತಿಸಲಾಗಿದ್ದು, ಆ ಗ್ರಾಮಗಳಿಗೆ ಸಂಬಂದಿಸಿದಂತೆ  ಈಗಾಗಲೇ  ಕ್ರಿಯಾ ಯೋಜನೆ ರೂಪಿಸಲಾಗಿದೆ, ಪ್ರತಿ 2 ದಿನಕ್ಕೊಮ್ಮೆ ಎಲ್ಲಾ ಗ್ರಾಮ ಪಂಚಾಯತ್‍ಗಳ ಸಭೆ ನಡೆಸಲಾಗುತ್ತಿದೆ , ಪ್ರಸ್ತುತ ಸಮಸ್ಯೆ ಇಲ್ಲ ಎಂದು ಸಿಇಓ ಪ್ರೀತಿ ಗೆಹಲೋತ್ ತಿಳಿಸಿದರು.

ಜಿಲ್ಲೆಗೆ ವಿದೇಶದಿಂದ ಬಂದಿರುವ , 1974 ಭಾರತೀಯರು ಮತ್ತು 16 ಜನ ವಿದೇಶಿಯರು ಸೇರಿದಂತೆ ಒಟ್ಟು 1990 ಜನರ ಕ್ವಾರಂಟೈನ್ ಅವಧಿ ಏಪ್ರಿಲ್ 5 ಕ್ಕೆ ಮುಕ್ತಾಯಗೊಂಡಿದ್ದು, ಇನ್ನೂ 14 ದಿನ ಅವರನ್ನು ನಿಗಾದಲ್ಲಿಡಲಾಗಿದೆ , ಪಾಸಿಟಿವ್ ಪ್ರಕರಣ ಕಂಡು ಬಂದ 3 ವ್ಯಕ್ತಿಗಳ ಸಂಪರ್ಕದಲ್ಲಿದ್ದ 43 ವ್ಯಕ್ತಿಗಳನ್ನು ಕ್ವಾರಟೈಂನ್‍ನಲ್ಲಿಟ್ಟಿದ್ದು, ಎಲ್ಲರ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಎಸ್ಪಿ ವಿಷ್ಣುವರ್ಧನ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‍ಓ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಕೊರೋನಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಉಪಸ್ಥಿತರಿದ್ದರು.