ಉಡುಪಿ :ರಾಷ್ಟ್ರೀಯ ಗ್ರಾಹಕರ ದಿನಾಚರಣೆ 

ಉಡುಪಿ: ಇಲ್ಲಿನ ಕಡಿಯಾಳಿ ಕಮಲಾ ಬಾಯಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಯಿತು. 
ಕಾರ್ಯಕ್ರಮವನ್ನು ಕಮಲಾ ಬಾಯಿ ಹೈಸ್ಕೂಲ್‍ನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲತಾ ಆನಂದ ಶೇರೆಗಾರ್ ಉದ್ಘಾಟಿಸಿ, ಗ್ರಾಹಕರು ವಸ್ತುಗಳನ್ನು ಖರೀದಿಸುವ ಮುನ್ನ ಸಮಗ್ರವಾಗಿ ಪರಿಶೀಲಿಸಬೇಕು. ಪ್ಯಾಕೆಟ್  ಮೇಲಿನ ಅವಧಿ ಮೀರುವ ದಿನಾಂಕ, ಉತ್ಪಾದನಾ ದಿನಾಂಕಗಳನ್ನು ಪರಿಶೀಲಿಸಿ ವಸ್ತುಗಳನ್ನು ಖರೀದಿಸಬೇಕು. ಖರೀದಿಸುವ ವಸ್ತುಗಳಲ್ಲಿ ಯಾವುದೇ ದೋಷಗಳಿದ್ದರೆ ಗ್ರಾಹಕ ವೇದಿಕೆಗಳ ಮೂಲಕ ದೂರು ದಾಖಲಿಸಿ ಪರಿಹಾರ ಪಡೆಯಬಹುದಾಗಿದ್ದು, ವ್ಯಾಪಾರಿಗಳಿಂದ ಮೋಸ ಹೋಗದಂತೆ ಸದಾ ಜಾಗೃತರಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ರೀತಿಯ ತೂಕ ಮತ್ತು ಅಳತೆ ಯಂತ್ರಗಳ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮುಖ್ಯೋಪಧ್ಯಾಯ ಗಣೇಶ್ ಮೂರ್ತಿ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಬಳಕೆದಾರರ ವೇದಿಕೆ ವಿಶ್ವಸ್ಥ ಐ.ಕೆ. ಜಯಚಂದ್ರ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಡಿ.ಆರ್.ಚೌಗುಲಾ, ಅಧ್ಯಾಪಕ ಸುದರ್ಶನ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಡುಪಿ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಉಡುಪಿ, ಬಸ್ರೂರು ಬಳಕೆದಾರರ ವೇದಿಕೆ ಕುಂದಾಪುರ, ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
 ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಎಂ.ಆರ್ ಭಟ್ ಸ್ವಾಗತಿಸಿದರು, ವಿದ್ಯಾರ್ಥಿ ಪ್ರವೀಣ್ ನಿರೂಪಿಸಿದರು.