ಉಡುಪಿ: ನಗರಸಭೆಯ ಸಾಮಾನ್ಯ ಸಭೆಯ ಸಿಂಧುತ್ವ ಪ್ರಶ್ನಿಸಿ ಕಾಂಗ್ರೆಸ್ ನಿಂದ ಡಿಸಿಗೆ ಮನವಿ

ಉಡುಪಿ: ಕರ್ನಾಟಕ ಹೈಕೋರ್ಟ್ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‍ ಗೆ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಯನ್ನು ರದ್ದುಗೊಳಿಸಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಉಡುಪಿ ನಗರಸಭೆಯ ಸಾಮಾನ್ಯ ಸಭೆಯ ಸಿಂಧುತ್ವ ಪ್ರಶ್ನಿಸಿ ಉಡುಪಿ ಕಾಂಗ್ರೆಸ್ ವತಿಯಿಂದ ಇಂದು ನಗರಸಭೆ ಪೌರಾಯುಕ್ತರಿಗೆ ಹಾಗೂ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಹೈಕೋರ್ಟ್ ಏಕ ಸದಸ್ಯ ಪೀಠ ಇತ್ತೀಚೆಗೆ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್‍ನ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಯನ್ನು ರದ್ದುಗೊಳಿಸಿ ಆದೇಶ ನೀಡಿದೆ.

ರೋಸ್ಟರ್ ಪದ್ದತಿಯನ್ನು ಅನುಸರಿಸಿ ಅಧ್ಯಕ್ಷರ ಉಪಾಧ್ಯಕ್ಷರ ನೇಮಕಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸರಕಾರಕ್ಕೆ ಆದೇಶಿಸಿದೆ. ಆ ಪ್ರಕಾರ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪ್ರಸ್ತುತ ಹುದ್ದೆ ಅಮಾನತುಗೊಂಡಿದ್ದು, ಅವರಿಗೆ ಯಾವುದೇ ಅಧಿಕಾರಿಗಳ ಸಭೆ ಅಥವಾ ಸಾಮಾನ್ಯ ಸಭೆ ನಡೆಸುವ ಸಾಂವಿಧಾನಿಕ ಹಕ್ಕು ಇರುವುದಿಲ್ಲ. ಆದರೆ ಉಡುಪಿ ನಗರಸಭೆಯು ಈಗಾಗಲೇ ನವೆಂಬರ್ 26ರಂದು ಸಾಮಾನ್ಯ ಸಭೆ ನಡೆಯುವ ಬಗ್ಗೆ ಎಲ್ಲಾ ನಗರಸಭಾ ಸದಸ್ಯರಿಗೆ ಹಾಗೂ ಸಂಬಂಧಪಟ್ಟವರಿಗೆ ಕಾರ್ಯಸೂಚಿಯನ್ನು ವಿತರಿಸಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈ ಸಾಮಾನ್ಯ ಸಭೆಯ ಸಿಂಧುತ್ವದ ಬಗ್ಗೆ ಸ್ಪಷ್ಟ ಉತ್ತರ ನೀಡಬೇಕಾಗಿ ವಿನಂತಿಸಿ ಕಾಂಗ್ರೆಸ್ ವತಿಯಿಂದ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಣ್ಣಯ್ಯ ಶೇರಿಗಾರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ನಗರಸಭಾ ಸದಸ್ಯರುಗಳಾದ ಅಮೃತಾ ಕೃಷ್ಣಮೂರ್ತಿ, ರಮೇಶ್ ಕಾಂಚನ್, ಸೆಲಿನ್ ಕರ್ಕಡ, ವಿಜಯ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ಮೀನಾಕ್ಷಿ ಮಾಧವ ಬನ್ನಂಜೆ, ಯುವರಾಜ್, ಹಾಗೂ ಯತೀಶ್ ಕರ್ಕೆರಾ, ಮಿಥುನ್ ಅಮೀನ್, ಅಬುಬಕರ್, ಸಾಯಿರಾಜ್ ಮೊದಲಾದವರು ಉಪಸ್ಥಿತರಿದ್ದರು.