ಉಡುಪಿ: ಗೋ ಪೂಜೆ ನೆರವೇರಿಸುವ ಮೂಲಕ ಗೋಹತ್ಯೆ ನಿಷೇಧ ಕಾನೂನಿಗೆ ಮುಖ್ಯಮಂತ್ರಿಗಳಿಂದ ಚಾಲನೆ

ಉಡುಪಿ: ರಾಜ್ಯಪಾಲರ ಅಂಗೀಕಾರದೊಂದಿಗೆ ಇಂದಿನಿಂದ ರಾಜ್ಯದಲ್ಲಿ ಜಾರಿಗೆ ಬಂದಿರುವ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ಕರಂಬಳ್ಳಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು.

ದೇವಸ್ಥಾನದ ಧ್ವಜಸ್ತಂಬದ ಎದುರು ದೇಸಿ ತಳಿಗೆ ಲಕ್ಷ್ಮೀ ಮತ್ತು ಸುರಭಿ ಕರುವಿಗೆ ಆವರಣದಲ್ಲಿ ಗೋ ಪೂಜೆ ನೆರವೇರಿಸುವ ಮೂಲಕ ಕಾಯ್ದೆಯನ್ನು ಅಧಿಕೃತವಾಗಿ ಅನುಷ್ಠಾನಗೊಳಿಸಿದರು. ದನ ಮತ್ತು ಕರುವಿಗೆ ಹಣ್ಣು ಹಿಂಡಿ ಮತ್ತು ಹುಲ್ಲು ನೀಡಿ ಗೋಪೂಜೆ ನೆರವೇರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಮಹಾತ್ಮ ಗಾಂಧೀಜಿ ಅವರ ರಾಮರಾಜ್ಯ ಕನಸಿನ ಗೋ ಹತ್ಯೆ ನಿಷೇಧ ಆಗಬೇಕೆಂಬ ಅಪೇಕ್ಷೆಯಂತೆ ಇಂದಿನಿಂದ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಾಗಿದೆ. ಈ ಐತಿಹಾಸಿಕ ನಿರ್ಣಯಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಸಿಎಂ ತಿಳಿಸಿದರು.

ಪೇಜಾವರ ಮಠ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ದೇವಸ್ಥಾನ ದ ಆಡಳಿತ ಮೊಕ್ತೇಸರ ಶಾಸಕ ಕೆ.ರಘುಪತಿ ಭಟ್, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ರಾಘವೇಂದ್ರ ಕಿಣಿ, ಮಟ್ಟಾರು ರತ್ನಾಕರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.