ಉಡುಪಿ: ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘವು 12ನೇ ವರ್ಷದ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ದಿನೇಶ್ ಸಿ . ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆಸಿತು.
ಸಂಘವು 12ನೇ ವರ್ಷದಲ್ಲಿ 3,708 ಸದಸ್ಯರನ್ನು ಹೊಂದಿದ್ದು, ಸುಮಾರು ಪ್ರಸಕ್ತ ಸಾಲಿನಲ್ಲಿ ₹45 ಕೋಟಿ ವ್ಯವಹಾರ ನಡೆಸಿರುವ ಸಂಘವು ಸದಸ್ಯರಿಗೆ ವಿವಿಧ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದ್ದು, ಸುಮಾರು ₹50 ಲಕ್ಷ ಪಾಲು ಬಂಡವಾಳ ಹೊಂದುವ ಗುರಿ ಇದೆ.
ಸಂಘದ ವ್ಯವಹಾರವನ್ನು ವಿಸ್ತರಿಸಿಕೊಂಡು ಸದಸ್ಯರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.9ರಷ್ಟು ಲಾಭಾಂಶ ಘೋಷಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ನೂತನ ವೆಬ್ಸೈಟ್ ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, “ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕತೆ ಹಾಗೂ ಸದಸ್ಯರಿಗೆ ತ್ವರಿತ ಮತ್ತು ಸುಲಭ ಸೇವೆ ಒದಗಿಸುವ ನಿಟ್ಟಿನಲ್ಲಿ ಡಿಜಿಟಲ್ ಅಭಿವೃದ್ಧಿಯತ್ತ ಸಂಘ ಇಟ್ಟಿರುವ ಈ ಹೆಜ್ಜೆ ಶ್ಲಾಘನೀಯವಾಗಿದೆ.
ವೆಬ್ಸೈಟ್ ಮೂಲಕ ಸದಸ್ಯರಿಗೆ ಅಗತ್ಯ ಮಾಹಿತಿ ಹಾಗೂ ಸೇವೆಗಳು ಸುಲಭವಾಗಿ ಲಭ್ಯವಾಗಲಿದ್ದು, ಸಂಘದ ಆಡಳಿತ ವ್ಯವಸ್ಥೆ ಮತ್ತಷ್ಟು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಲಿದೆ” ಎಂದರು.
ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ವಿಶಿಷ್ಟ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಸಂಘದ ಸದಸ್ಯರ ಮಕ್ಕಳಿಗೆ ಶುಭ ಹಾರೈಸಿ, ಪ್ರೋತ್ಸಹ ಧನ ವಿತರಿಸಿ, ನೋಟ್ ಬುಕ್ ವಿತರಿಸಲಾಯಿತು.
ಮುಖ್ಯಉಪಾಧ್ಯಾಯರಾಗಿ ನಿವೃತ್ತಿ ಹೊಂದಿದ ನಿರ್ದೇಶಕರಾದ ಚಂದ್ರ ಎಚ್ ನಾಯ್ಕ್ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಸಂಘದ ಬೆಳವಣಿಗೆಯಲ್ಲಿ ಸಹಕಾರಿಗಳು, ಪ್ರೋತ್ಸಾಹಕರು, ಹಿತೈಷಿಗಳು ಹಾಗೂ ಸದಸ್ಯರ ಪಾತ್ರ ಮಹತ್ವದ್ದಾಗಿದೆ. ಎಲ್ಲರ ಸಹಕಾರದಿಂದಲೇ ಸಂಘವು ನಿರಂತರ ಪ್ರಗತಿ ಸಾಧಿಸುತ್ತಿದ್ದು, ಮುಂದೆಯೂ ಇದೇ ರೀತಿಯ ಬೆಂಬಲ ಮತ್ತು ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಗಣೇಶ್, ಲಕ್ಷ್ಮಣ್ ನಾಯ್ಕ್, ಆರ್ ಸಿ ನಾಯ್ಕ್, ಸತೀಶ ನಾಯ್ಕ್, ಚಂದ್ರ ಎಚ್ ನಾಯ್ಕ್, ಕೃಷ್ಣ ನಾಯ್ಕ್, ಕರುಣಾಕರ ಕಾಂಚನ, ರಘುನಾಥ್ ನಾಯ್ಕ್ ಹರೀಶ್ ನಾಯ್ಕ್, ಶೇಖರ್ ಶೆಟ್ಟಿ, ಶ್ರೀಮತಿ ಜ್ಯೋತಿ ಶೆಟ್ಟಿ, ಶ್ರೀಮತಿ ಶೋಭಾ, ಕುಮಾರಿ ಅಶ್ವಿನಿ ಪ್ರಾರ್ಥನೆ ಮಾಡಿ ಸಿಬ್ಬಂದಿ ಕಿರಣ ಕುಮಾರ್ ಸ್ವಾಗತಿಸಿ, ಸಿ ಇ ಓ ಪ್ರಶಾಂತ್ ಶೀರೂರು ವಾರ್ಷಿಕ ವರದಿ ವಾಚಿಸಿ ವಂದಿಸಿದರು.















