ಉಡುಪಿ: ಉಡುಪಿ ದೂರಸಂಪರ್ಕ ವಿಭಾಗ (ಕುಂದಾಪುರ, ಉಡುಪಿ, ಕಾರ್ಕಳ) ದಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರ ಮೂರು ತಿಂಗಳ ವೇತನ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಬಿಎಸ್ಎನ್ಎಲ್ ಗುತ್ತಿಗೆ ನೌಕರರ ಒಕ್ಕೂಟದ ನೇತೃತ್ವದಲ್ಲಿ ಗುತ್ತಿಗೆ ನೌಕರರು ಶುಕ್ರವಾರದಿಂದ ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿಯ ಮುಷ್ಕರ ಆರಂಭಿಸಿದರು.
ಉಡುಪಿ ಬಿಎಸ್ಎನ್ಎಲ್ ಕಚೇರಿಯಲ್ಲಿ ದುಡಿಯುತ್ತಿರುವ ಗುತ್ತಿಗೆ ನೌಕರರು ಕೆಲಸ ಸ್ಥಗಿತಗೊಳಿಸಿ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಿದರು. ಉಡುಪಿ ದೂರು ಸಂಪರ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಅಕ್ಟೋಬರ್ನಿಂದ ವೇತನ ಆಗಿಲ್ಲ. ಕಾರ್ಮಿಕರಿಗೆ ನೀಡುತ್ತಿರುವ ಕಡಿಮೆ ವೇತನವನ್ನು ಸಂಸ್ಥೆ ಸರಿಯಾಗಿ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಬಿಎಸ್ಎನ್ಎಲ್ ಗುತ್ತಿಗೆ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ
ಶಶಿಧರ್ ಗೊಲ್ಲ ಮಾತನಾಡಿ, ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿರುವ ಈ ದಿನಗಳಲ್ಲಿ ಒಂದು ತಿಂಗಳ ವೇತನ ಸಿಗದಿದ್ದರೂ ಪರದಾಡಬೇಕಾದ ಸ್ಥಿತಿ ಇದೆ. ಪರಿಸ್ಥಿತಿ ಹೀಗಿರುವಾಗ ಮೂರ್ನಾಲ್ಕು ತಿಂಗಳಿನಿಂದ ನೌಕರರಿಗೆ ವೇತನ ನೀಡಿಲ್ಲ. ತಕ್ಷಣ ವೇತನ ಪಾವತಿಯಾಗುವ ಲಕ್ಷಣವೂ ಕಾಣುತ್ತಿಲ್ಲ. ಹಾಗಾಗಿ ಕೆಲಸವನ್ನು ಸ್ಥಗಿತ ಮಾಡಿ ಮುಷ್ಕರ ಮಾಡುವ ತೀರ್ಮಾನಕ್ಕೆ ಬಂದಿದ್ದೇವೆ ಎಂದರು. ಜಿಲ್ಲೆಯಲ್ಲಿ 200 ಗುತ್ತಿಗೆ ನೌಕರರು ಇದ್ದಾರೆ. ಅವರಿಗೆ ನಾಲ್ಕು ತಿಂಗಳಿನಿಂದ ವೇತನ ಆಗಿಲ್ಲ. ಆದ್ದರಿಂದ ಫೆ. 1ರಿಂದ ಗುತ್ತಿಗೆ ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ.
ಜಿಲ್ಲೆಯ ಉನ್ನತ ಅಧಿಕಾರಿಗಳು ನೌಕರರ ವೇತನ ಸಮಸ್ಯೆಯನ್ನು ಬಗೆಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಮೋಹನ್, ರಾಜ್ಯ ಸಮಿತಿಯ ಸದಸ್ಯರಾದ ಉದಯ ಬ್ರಹ್ಮಾವರ, ರಾಘವೇಂದ್ರ, ಸಂತೋಷ್, ಸೀತಾರಾಮ, ಜಯರಾಮ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.