ಉಡುಪಿ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಯುವಕನ ಮೃತದೇಹ ಪತ್ತೆ

ಉಡುಪಿ: ಇಲ್ಲಿನ ನಿಟ್ಟೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ದಂಡೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಅಪರಿಚಿತ ಯುವಕನೊಬ್ಬನ ಮೃತದೇಹ ಇಂದು ಪತ್ತೆಯಾಗಿದೆ.

ಮೃತ ಯುವಕನನ್ನು ಕಾರ್ಕಳ ರಂಗನಪಲ್ಕೆಯ ನಿವಾಸಿ ಅಕ್ಷತ್ (28) ಎಂದು ಗುರುತಿಸಲಾಗಿದೆ. ಈತ ನಗರಸಭೆ ವಾರ್ಡುಗಳಲ್ಲಿ ಮನೆಯಿಂದ ಕಸ ಸಂಗ್ರಹಿಸುವ ಗುತ್ತಿಗೆದಾರರ ಬಳಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಎಂದು ತಿಳಿದುಬಂದಿದೆ.

ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಮೃತನ ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದರು‌. ಬಳಿಕ ಯುವಕನ ಸಂಬಂಧಿಕರನ್ನು ಪತ್ತೆಹಚ್ಚಲು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ಬಿತ್ತರಿಸಿದರು.ಇದರಿಂದ ಯುವಕ ಕಾರ್ಕಳ ರಂಗನಪಲ್ಕೆ ನಿವಾಸಿಯಾಗಿದ್ದು, ಈತನ ತಂದೆ ಭೋಜ ಪೂಜಾರಿ ಹಾಗೂ ತಾಯಿ ಲೀಲಾ ಪೂಜಾರಿ ಎಂದು ಗೊತ್ತಾಗಿದೆ. ಬಳಿಕ ಅವರೇ ಜಿಲ್ಲಾಸ್ಪತ್ರೆಗೆ ಬಂದು ಮಗನ ಗುರುತನ್ನು ಪತ್ತೆ ಮಾಡಿದ್ದಾರೆ.

ಅಂತ್ಯಸಂಸ್ಕಾರ ನಡೆಸಿ ಮಾನವೀಯತೆ ಮೆರೆದ ಸಮಾಜಸೇವಕರು:
ಮಗನ ಅಂತ್ಯಸಂಸ್ಕಾರ ನಡೆಸಲು ಅಸಹಾಯಕ ಹೆತ್ತವರಿಂದ ಅಸಾಧ್ಯವೆಂದು ಮನಗಂಡ ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ನೆರವಾದರು. ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಸುಶೀಲಾ ರಾವ್ ಉಡುಪಿ ಆರ್ಥಿಕ ನೆರವು ನೀಡಿದರು. ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ರುದ್ರಭೂಮಿಗೆ ಶವ ಸಾಗಿಸಲು ಉಚಿತ ಅಂಬ್ಯುಲೆನ್ಸ್ ಸೇವೆಯನ್ನು ಒದಗಿಸಿತು.