ಉಡುಪಿ: ಬಿಜೆಪಿ ಉಡುಪಿ ಜಿಲ್ಲಾ ಘಟಕದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಇಂದು ನಗರದ ಕಿದಿಯೂರು ಹೋಟೆಲ್ ನಲ್ಲಿ ನಡೆದ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಪದಗ್ರಹಣ ಸಮಾರಂಭಕ್ಕೆ ಜಿಲ್ಲೆಯ ಐವರು ಶಾಸಕರ ಪೈಕಿ ಇಬ್ಬರು ಶಾಸಕರು ಗೈರಾಗುವ ಮೂಲಕ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಸಮಾರಂಭಕ್ಕೆ ಗೈರಾಗಿದ್ದು, ಆ ಮೂಲಕ ತಮ್ಮೊಳಗೆ ಕುದಿಯುತ್ತಿದ್ದ ಅಸಮಾಧಾನದ ಜ್ವಾಲೆಯನ್ನು ಹೊರಹಾಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೇ ಕಾರ್ಯಕ್ರಮ ಬಂದಿದ್ದರೂ ಈ ಇಬ್ಬರು ಶಾಸಕರು ಕಾರ್ಯಕ್ರಮ ಬಂದಿರಲಿಲ್ಲ. ಆಯೋಜಕರು ಕೊನೆಯವರೆಗೂ ಎರಡು ಕುರ್ಚಿಗಳನ್ನು ಖಾಲಿ ಬಿಟ್ಟು ಶಾಸಕರಿಗಾಗಿ ಕಾಯುತ್ತಿದ್ದರು.
ರಾಜ್ಯ ಸರ್ಕಾರದಲ್ಲಿ ಈಗಾಗಲೇ ವಲಸಿಗರು ಮತ್ತು ಮೂಲ ಬಿಜೆಪಿಗರು ಎಂಬ ಹಗ್ಗಾಜಗ್ಗಾಟ ನಡೆಯುತ್ತಿದ್ದು, ಅದಕ್ಕೆ ಇಂದು ಉಡುಪಿಯಲ್ಲಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಇಬ್ಬರು ಮೂಲ ಬಿಜೆಪಿ ಶಾಸಕರು ಗೈರಾಗುವ ಮೂಲಕ ಮತ್ತಷ್ಟು ಪುಷ್ಟಿ ನೀಡಿದ್ದಾರೆ. ಈಗ ಪಕ್ಷದಲ್ಲಿ ಸಣ್ಣ ಪ್ರಮಾಣದಲ್ಲಿ ಹೊತ್ತಿರುವ ಸಮಾಧಾನದ ಕಿಡಿ ಎಲ್ಲಿಗೆ ಹೋಗಿ ತಲುಪುತ್ತದೆ ಎಂದು ಕಾದುನೋಡಬೇಕಾಗಿದೆ.