ಜ. 27ಕ್ಕೆ ಸಿಎಎ ಬೆಂಬಲಿಸಿ ‘ಮಂಗಳೂರು ಚಲೋ’ – ಸಿಎಎ ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ: ಮಟ್ಟಾರು

ಉಡುಪಿ: ಸಿಎಎ ಪೌರತ್ವ ಕೊಡುವ ಕಾಯ್ದೆ, ಪೌರತ್ವ ಕಿತ್ತುಕೊಳ್ಳುವ ಕಾಯ್ದೆಯಲ್ಲ. ಆದರೆ ಸಿಎಎ ಹಾಗೂ ಎನ್‌ಆರ್‌ಸಿ ಕಾಯ್ದೆಯ ಬಗ್ಗೆ ಕೆಲವೊಂದು ಸಂಘಟನೆಗಳು ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಿದೆ. ದೇಶದಿಂದ ಓಡಿಸುತ್ತಾರೆ. ಪೌರತ್ವ ಕಿತ್ತುಕೊಳ್ಳುತ್ತಾರೆ ಎಂಬಂತಹ ವದಂತಿಗಳನ್ನು ಹರಡಿಸುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ದೂರಿದರು.
ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಯ ರಾಜಸ್ತಾನದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌  ಪ್ರಣಾಳಿಕೆಯಲ್ಲಿ ಸಿಎಎ ಬಗ್ಗೆ ಉಲ್ಲೇಖಿಸಲಾಗಿತ್ತು. ಅಲ್ಲದೆ, ಕಾಂಗ್ರೆಸ್‌ ಹಾಗೂ ಕಮ್ಯೂನಿಸ್ಟ್‌ ಪಕ್ಷಗಳು ಈ ಕಾಯ್ದೆಯನ್ನು ಈ ಹಿಂದೆಯೇ ಜಾರಿಗೊಳಿಸಲು ಚಿಂತಿಸಿದ್ದವು. ಹಾಗಾಗಿ ಈಗ ವಿರೋಧ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ಜ. 27ಕ್ಕೆ ಸಿಎಎ ಬೆಂಬಲಿಸಿ ‘ಮಂಗಳೂರು ಚಲೋ’:
ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ಎನ್‌ಆರ್‌ಸಿ ಕಾಯ್ದೆಯನ್ನು ಬೆಂಬಲಿಸಿ ಜ. 27ರಂದು ಮಧ್ಯಾಹ್ನ 3ಗಂಟೆಗೆ ಮಂಗಳೂರಿನ ಗೋಲ್ಡ್‌ಫಿಂಚ್‌ ಮೈದಾನದಲ್ಲಿ ‘ಮಂಗಳೂರು ಚಲೋ’ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದರು.
ಈ ಸಮಾವೇಶದಲ್ಲಿ ಸುಮಾರು 2 ಲಕ್ಷದಷ್ಟು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಳ್ಳುವರು. ಮುಖ್ಯ ಭಾಷಣಕಾರರಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾಗವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮುಖಂಡರಾದ ಗಿರೀಶ್‌ ಅಂಚನ್‌, ಗುರುಪ್ರಸಾದ್‌ ಶೆಟ್ಟಿ, ಪ್ರತಾಪ್‌ ಶೆಟ್ಟಿ ಇದ್ದರು.