ಉಡುಪಿ: ಇದೇ 11ರಂದು ಉಡುಪಿಯಲ್ಲಿ ನಡೆಯಬೇಕಿದ್ದ ಬಿಲ್ಲವ ಮತ್ತು ಮುಸ್ಲಿಮ್ ಸ್ನೇಹ ಸಮಾವೇಶ ವಿರುದ್ಧ ಕೆಲವರು ಗೊಂದಲ ಸೃಷ್ಟಿಸಿ, ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸಮಾಜ ಮತ್ತು ಸಮುದಾಯದ ಒಳಿತನ್ನು ಬಲಿಕೊಟ್ಟು ಕೀಳುಮಟ್ಟದ ಕುತಂತ್ರ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.
ಅಜ್ಜರಕಾಡಿನ ಪುರಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಿಸಿ ಶುದ್ಧ ಸುಳ್ಳುಗಳನ್ನು ಪಸರಿಸುತ್ತಿದ್ದಾರೆ. ನಮ್ಮ ಸ್ವಾಗತ ಸಮಿತಿಯ ಸದಸ್ಯರು ಮತ್ತು ಅತಿಥಿಗಳ ಮೇಲೆ ಕೀಳುಮಟ್ಟದ ಅಸಹನೀಯ ಭಾಷೆಯನ್ನು ಬಳಸಿ ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೆ, ಈ ಸಮಾವೇಶದಿಂದ ಹಿಂದೆ ಸರಿಯುವಂತೆ ಮಾನಸಿಕ ಒತ್ತಡ ಮತ್ತು ದೈಹಿಕ ಹಲ್ಲೆ ನಡೆಸುವ ಬೆದರಿಕೆಯನ್ನು ಒಡ್ಡುತ್ತಿದ್ದಾರೆ ಎಂದರು.
ಈ ಕಾರಣಗಳಿಂದ ಸ್ವಾಗತ ಸಮಿತಿಯ ಒಂದಿಬ್ಬರು ಹಿಂದೆ ಸರಿದಿದ್ದಾರೆ. ಉದ್ಘಾಟಕರಾಗಿ ಬರಬೇಕಾಗಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಮಗೆ ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಾಗುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಇಂತಹ ಗೊಂದಲದ ಪರಿಸ್ಥಿತಿಯಲ್ಲಿ ಹಾಗೂ ಉಡುಪಿ ಪರ್ಯಾಯೋತ್ಸವ ಇರುವುದರಿಂದ ಸಮಾವೇಶವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಸಮಾವೇಶಕ್ಕೆ ಸಚಿವ ಕೋಟ ಒಪ್ಪಿಗೆಯಿತ್ತು:
ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೆಸರನ್ನು ಅವರ ಒಪ್ಪಿಗೆ ಪಡೆಯದೆ, ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ ಎಂಬಂತಹ ವದಂತಿಗಳನ್ನು ಹರಿಯಬಿಡಲಾಗಿದೆ. ಆದರೆ ಇದು ಶುದ್ಧ ಸುಳ್ಳು. ಅವರನ್ನು ಕನಿಷ್ಠ ಮೂರು ಬಾರಿ ಸಂಪರ್ಕಿಸಿ, ಒಪ್ಪಿಗೆ ಪಡೆದಿದ್ದೇವೆ.
ಆ ಬಳಿಕವೇ ಕೆಲವು ಆಮಂತ್ರಣ ಪತ್ರಿಕೆಯ ಪ್ರತಿಗಳನ್ನು ಮುದ್ರಿಸಿ ನಿಯೋಗವೊಂದರ ಮೂಲಕ ಅವರನ್ನು ಭೇಟಿ ಮಾಡಿ ವಿದ್ಯುಕ್ತವಾಗಿ ಆಮಂತ್ರಿಸಲಾಗಿತ್ತು. ಅದನ್ನು ಅವರು ಸಂತೋಷದಿಂದ ಒಪ್ಪಿಕೊಂಡ ಬಳಿಕ ಮರುದಿನ ಜನರನ್ನು ಆಮಂತ್ರಿಸಲಿಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಮಂತ್ರಣ ಪತ್ರಿಕೆ ಮುದ್ರಿಸಿ, ಪ್ರತಿನಿಧಿಗಳ ಮೂಲಕ ವಿತರಿಸಲಾಯಿತು.
ಆಮಂತ್ರಣ ಪತ್ರಿಕೆ ನೀಡಲು ಹೋದ ನಿಯೋಗದಲ್ಲಿ ಬಿ.ಎನ್. ಶಂಕರಪೂಜಾರಿ, ಜನಾರ್ದನ ತೋನ್ಸೆ, ರಾಮ ಪೂಜಾರಿ, ಇದ್ರಿಸ್ ಹೂಡೆ, ಎಂ.ಎ. ಮೌಲಾ ಉಡುಪಿ, ಕರಾಮತ್ ಅಲಿ ಮತ್ತು ಕೋಟಾ ಇಬ್ರಾಹಿಂ ಸಾಹೇಬ್ ಇದ್ದರು ಎಂದರು.
ಶಾಸಕ ಸುನಿಲ್ ಕುಮಾರ್ ಅವರಿಗೆ ಖುದ್ದಾಗಿ ನಾನೇ ದೂರವಾಣಿ ಕರೆ ಮಾಡಿ ಸಮಾವೇಶಕ್ಕೆ ಆಹ್ವಾನಿಸಿದ್ದೆ. ಅವರು ವಿಮರ್ಶೆ ಮಾಡಿ ಹೇಳುತ್ತೇನೆ ಎಂದಿದ್ದರು. ಆದರೆ ಅವರು ಮತ್ತೆ ಕರೆ ಮಾಡಿ ತಿಳಿಸಿಲ್ಲ. ಅದಕ್ಕಾಗಿ ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿ ಹಾಕಿಲ್ಲ ಎಂದು ಹೇಳಿದರು.
ನಾವು ನಡೆಸುವ ಸಮಾವೇಶದ ಹಿಂದೆ ರಾಜಕೀಯ ಉದ್ದೇಶ ಇದ್ದಾರೆ. ನಾವು ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್ ಅವರನ್ನು ಯಾಕೆ ಕರೆಯುತ್ತಿದ್ದೇವು ಎಂದು ಸೊರಕೆ ಪ್ರಶ್ನಿಸಿದರು.
ಮುಸ್ಲಿಂ ಒಕ್ಕೂಟದವರು ಬೇರೆ ಬೇರೆ ಸಮುದಾಯಗಳ ಜತೆಗೆ ಮಾತುಕತೆ ನಡೆಸಿ, ಸ್ನೇಹ ಸಮಾವೇಶ ನಡೆಸಲು ಉದ್ದೇಶಿಸಿದ್ದಾರೆ. ಈ ಹಿಂದೆಯೂ ಇಂತಹ ಸಮಾವೇಶ ಆಗಿತ್ತು. ಸಮಾವೇಶದ ಕುರಿತಂತೆ 2019ರ ಅಕ್ಟೋಬರ್ 30ರಂದು ಬಿಲ್ಲವ ಸಮಾಜದ ಸಮನಮನಸ್ಕರ ಮುಖಂಡರ ಸಭೆ ಕರೆಯಲಾಗಿತ್ತು. ಅದರಲ್ಲಿ 60ರಿಂದ 70 ಜನ ಬಿಲ್ಲವ ಮುಖಂಡರು ಭಾಗವಹಿಸಿದ್ದರು.
ಇದೊಂದು ಒಳ್ಳೆಯ ಕಾರ್ಯಕ್ರಮ ಇದನ್ನು ನಡೆಸಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಅದರಂತೆ ಮೊಗವೀರ ಸಮಾಜದ ಮುಖಂಡರನ್ನು ಕರೆದು ಸಭೆ ನಡೆಸಲಾಗಿತ್ತು. ಅಲ್ಲದೆ ಫೆ. 1ರಂದು ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ, ಜಿಪಂ ಸದಸ್ಯ ಜನಾರ್ದನ ತೋನ್ಸೆ, ಬಿಲ್ಲವ ಮುಖಂಡರಾದ ನವೀನ್ ಚಂದ್ರ ಸುವರ್ಣ ಅಡ್ವೆ, ಚಂದು ಪೂಜಾರಿಯವರ ಮಗ ರಾಜರಾಮ್ ಸಾಸ್ತಾನ, ಸುಧೀರ್ ಕುಮಾರ್, ಶ್ರೀಕರ ಅಂಚನ್, ಸುಧಾಕರ ಕಲ್ಮಾಡಿ, ಸುಭೀತ್ ಕಾರ್ಕಳ, ತಿಮ್ಮ ಪೂಜಾರಿ ಕೋಟ, ಆನಂದ ಪೂಜಾರಿ ಬನ್ನಂಜೆ, ದಿನಕರ ಹೇರೂರು, ಒಕ್ಕೂಟದ ಇದ್ರೀಸ್ ಹೂಡೆ, ಮುಹಮ್ಮದ್ ಮೌಲಾ, ಶಬೀ ಅಹ್ಮದ್ ಖಾಝಿ, ಇಬ್ರಾಹಿಂ ಕೋಟ, ರಫೀಕ್ ಬಿಎಸ್ಎಫ್, ಮುಹಮ್ಮದ್ ಗೌಸ್, ಜಫರುಲ್ಲಾ ಹೂಡೆ, ಇಕ್ಬಾಲ್ ಕಟಪಾಡಿ ಮೊದಲಾದವರು ಹಾಜರಿದ್ದರು.