ಉಡುಪಿ: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಯುವತಿಯೊಬ್ಬಳನ್ನು ದಾಖಲಿಸಿ, ಆಕೆ ಮೃತಪಟ್ಟ ಬಳಿಕ ಪ್ರಿಯಕರ ನಾಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯುವತಿ ನೇಣಿಗೆ ಕೊರಳೊಡ್ಡಿದ್ದಳೆಂಬ ಶಂಕೆ ಮೂಡಿದೆ.
ಮೃತ ಯುವತಿಯನ್ನು ಉಡುಪಿ ತಾಲ್ಲೂಕಿನ ಕುಕ್ಕೆಹಳ್ಳಿ ನಿವಾಸಿ ರಕ್ಷಿತಾ ನಾಯಕ್ (20) ಎಂದು ಗುರುತಿಸಲಾಗಿದೆ. ಈಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದ ಪ್ರಿಯಕರ ಜಡ್ಕಲ್ ನಿವಾಸಿ ಪ್ರಶಾಂತ್ ಕುಂದರ್ ಎಂದು ತಿಳಿದುಬಂದಿದೆ.
ಬಿಂದಾಸ್ ಆಗಿ ಲೈಫ್ ಲೀಡ್ ಮಾಡ್ಬೇಕೆಂಬ ಕನಸು ಹೊತ್ತಿದ್ದ ರಕ್ಷಿತಾ ನಾಯಕ್ ಬದುಕು ಸೂತ್ರ ಹರಿದ ಗಾಳಿಪಟದಂತೆ ಆಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಸಂಸಾರದ ಸುಖ ಬಯಸಿದ್ದ ಆಕೆ, ಲಿವಿಂಗ್ ಇನ್ ರಿಲೇಶನ್ ಶಿಫ್ ಮೊರೆ ಹೋಗಿದ್ದಳು. ಮನೆಯವರಿಂದ ದೂರ ಆಗಿ ತನ್ನ ಪ್ರಿಯಕರನೊಂದಿಗೆ ವಾಸ ಮಾಡುತ್ತಿದ್ದಳು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ರಕ್ಷಿತಾ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿನಿಯಾಗಿದ್ದಳು. ನನಗೆ ಮಂಗಳೂರಿನ ಕೆಲಸ ಸಿಕ್ಕಿದೆ. ಉಡುಪಿಯ ಅಂಬಾಗಿಲಿನಲ್ಲಿ ಗೆಳತಿಯ ಜೊತೆಗೆ ಇರುತ್ತೇನೆಂದು ಮನೆಯವರಿಗೆ ತಿಳಿಸಿದ್ದಳು. ತಿಂಗಳಲ್ಲಿ ಎರಡು ಬಾರಿ ಮನೆಗೆ ಹೋಗಿ ಬರುತ್ತಿದ್ದಳು ಎನ್ನಲಾಗಿದೆ. ಆದರೆ ಇದೀಗ ರಕ್ಷಿತಾ ಮನೆಯವರಿಗೆ ಸುಳ್ಳು ಹೇಳಿದ್ದಳು ಎಂಬುವುದು ತನಿಖೆಯಿಂದ ಗೊತ್ತಾಗಿದೆ.
ಆ ಕೊನೆಯ ಕರೆ:
ರಕ್ಷಿತಾಳನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದ ಪ್ರಿಯಕರ ಜಡ್ಕಲ್ ನಿವಾಸಿ ಪ್ರಶಾಂತ್ ಕುಂದರ್ ನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಸಾವಿನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೆ, ರಕ್ಷಿತಾಳ ಕಾಲ್ ರೆಕಾರ್ಡ್ ಕೂಡ ಪೊಲೀಸರ ಕೈ ಸೇರಿದೆ. ಇದರಿಂದ ರಕ್ಷಿತಾಳ ಸಾವಿನ ಕುರಿತು ಸ್ಪೋಟಕ ವಿಚಾರ ಬಯಲಾಗಿದೆ.
ನಾನು ವಿಪರೀತ ಮದ್ಯ ಸೇವಿಸಿದ್ದೇನೆ. ನಾನು ಇನ್ನೂ ಬದುಕಲ್ಲ, ಸಾಯುತ್ತೇನೆಂದು ಪ್ರಶಾಂತ್ಗೆ ಕರೆ ಮಾಡಿ ತಿಳಿಸಿದ್ದಳು. ರಕ್ಷಿತಾ ಏನೂ ಅನಾಹುತ ಮಾಡಿಕೊಂಡಿದ್ದಳೆಂದು ತಿಳಿದು, ಮನೆಗೆ ದೌಡಿಸಿದ್ದನು. ಆಗ ರಕ್ಷಿತಾ ಅಸ್ವಸ್ಥಗೊಂಡಿದ್ದಳು. ಕೂಡಲೇ ಆಕೆಯನ್ನು ರಿಕ್ಷಾವೊಂದರ ಮೂಲಕ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದನು. ಆಕೆ ಮೃತಳಾಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದನು. ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದನು.
ಪ್ರಶಾಂತ್ ಗೆ ಮದುವೆಯಾಗಿತ್ತು:
ಪ್ರಿಯಕರ ಪ್ರಶಾಂತ್ ನನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆತನ ವಿರುದ್ಧ ರಕ್ಷಿತಾಳ ಮನೆಯವರು ನೀಡಿದ ದೂರಿನಂತೆ ಎಫ್ ಐಆರ್ ದಾಖಲಿಸಿ ಬಂಧಿಸಿದ್ದಾರೆ.
ಆತ ನಗರದ ಫರ್ನಿಚರ್ ವರ್ಲ್ಡ್ನಲ್ಲಿ ಕೆಲಸದಲ್ಲಿದ್ದ. ಇಂಟೀರಿಯರ್ ಡಿಸೈನ್ ಹಾಗೂ ಫರ್ನಿಚರ್ ಸೇಲ್ಸ್ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಈಗಾಗಲೇ ಆತನಿಗೆ ಮದುವೆಯಾಗಿದ್ದು, ಉಪ್ಪೂರಿನಲ್ಲಿ ಪತ್ನಿ ಜತೆಗೆ ವಾಸವಾಗಿದ್ದನು. ರಕ್ಷಿತಾಳಿಗೆ ಅಂಬಾಗಿಲಿನಲ್ಲಿ ಬಾಡಿಗೆ ಮನೆ ಮಾಡಿಕೊಟ್ಟಿದ್ದನು.
ಆತ್ಮಹತ್ಯೆಯ ಶಂಕೆ:
ರಕ್ಷಿತಾಳ ದೇಹದ ಕತ್ತಿನ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಗಾಯಗಳು ಪತ್ತೆಯಾಗಿವೆ. ಮೃತ ದೇಹವನ್ನು ಪರಿಶೀಲಿಸಿರುವ ವೈದ್ಯರು ಶರೀರದಲ್ಲಿ ಆಲ್ಕೋಹಾಲ್ ಅಂಶವಿರುವ ಬಗ್ಗೆ ವರದಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಹಾಗಾಗಿ ಇದು ಆತ್ಮಹತ್ಯೆಯೋ?. ಅಥವಾ ಕೊಲೆಯೂ ಎಂಬುವುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.