ಉಡುಪಿಯಲ್ಲಿ ಭರತಮುನಿ ಜಯಂತ್ಯುತ್ಸವ

 

ಉಡುಪಿ: ರಾಧಾಕೃಷ್ಣ ನೃತ್ಯನಿಕೇತನ ಸಂಸ್ಥೆಯು ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಡಿ. 25ರಂದು ಬೆಳಗ್ಗೆ 11 ಗಂಟೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಭರತಮುನಿ ಜಯಂತ್ಯುತ್ಸವವನ್ನು ಆಯೋಜಿಸಿದೆ.

 ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ನೃತ್ಯಗುರು ವಿದುಷಿ ವೀಣಾ ಎಂ. ಸಾಮಗ, ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅದಮಾರು ಮಠದ ಕಿರಿಯ ಈಶಪ್ರಿಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆಯನ್ನು ವಹಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಎಂದರು. 
ಇದೇ ವೇಳೆ ಸ್ಯಾಕ್ಸೋಫೋನ್ ವಾದಕ ಅಲೆವೂರು ಸುಂದರ ಸೇರಿಗಾರ್,  ನೃತ್ಯಗುರು ರೂಪಶ್ರೀ ಮಧುಸೂದನ್, ಭರತನಾಟ್ಯ-ಕಥಕ್ ಕಲಾವಿದೆ ಪೊನ್ನಮ್ಮ ದೇವಯ್ಯ ಹಾಗೂ ಕೂಚುಪುಡಿ ನೃತ್ಯಗುರು ಡಾ. ಸರಸ್ವತಿ ರಜತೇಶ್ ಅವರಿಗೆ ಭರತ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗಾಯತ್ರಿ ಅಭಿಷೇಕ್, ಶ್ವೇತಶ್ರೀ ಭಟ್, ಶ್ರೀಕಲ್ಯಾಣಿ ಜೆ. ಪೂಜಾರಿ, ಸುಷ್ಮಾ ಡಿ. ಪ್ರಭು ಅವರಿಗೆ ಗುರು ರಾಧಾಕೃಷ್ಣಾನುಗ್ರಹ ಪ್ರಶಸ್ತಿ ಮತ್ತು ಉಡುಪಿ ಪ್ರಭಾಕರ ಸೌಂಡ್ ಸಿಸ್ಟಮ್ಸ್ ನ ಯು. ವಿಜಯ ಕುಮಾರ್ ಅವರಿಗೆ ಕಲಾರ್ಷಣಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಚಾಲಕ ಬಿ. ಮುರಳೀಧರ ಸಾಮಗ, ಸಂಗೀತಗುರು ಪ್ರೇಮಾ ಆರ್. ತಂತ್ರಿ ಇದ್ದರು.