ಉಡುಪಿ: ಅಯೋಧ್ಯೆ ರಾಮಜನ್ಮಭೂಮಿ ವಿವಾದದ ಕುರಿತಂತೆ ಸುಪ್ರೀಂ ಕೋರ್ಟ್ ಪ್ರಕಟಿಸಲಿರುವ ತೀರ್ಪಿಗೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳು ಗೌರವ ನೀಡಬೇಕು. ಶಾಂತಿಗೆ ಭಂಗ ತರುವಂತಹ ವಿಜಯೋತ್ಸವ ಅಥವಾ ಪ್ರತಿಭಟನೆ ಮಾಡಬಾರದು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.
ಗುರುವಾರ ಪೇಜಾವರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಸುದೀರ್ಘ ವಿಚಾರಣೆ ನಡೆದಿದ್ದು, ಇದೇ 15ರೊಳಗೆ ತೀರ್ಪು ಬರುವ ವಿಶ್ವಾಸವಿದೆ. ಅಲ್ಲದೆ, ತೀರ್ಪು ಹಿಂದೂಗಳ ಪರವಾಗಿ ಬರುವ ವಿಶ್ವಾಸವಿದೆ. ಆದರೆ, ಅದನ್ನು ನಿಶ್ಚಿತವಾಗಿ ಹೇಳುವುದು ಅಸಾಧ್ಯ. ಹಾಗಾಗಿ ತೀರ್ಪು ಯಾರ ಪರವಾಗಿ ಬಂದರೂ ಹಿಂದು ಹಾಗೂ ಮುಸ್ಲಿಂ ಸಮುದಾಯಗಳು ತೀರ್ಪಿಗೆ ಬದ್ಧವಾಗಿರಬೇಕು. ಬೀದಿಗಿಳಿದು ವಿಜಯೋತ್ಸವ, ಮೆರವಣಿಗೆ ಅಥವಾ ಪ್ರತಿಭಟನೆ ಮಾಡಬಾರದು. ಶಾಂತಿ ಕಾಪಾಡುವುದೇ ವಿಶ್ವಹಿಂದೂ ಪರಿಷತ್ ಹಾಗೂ ಸಾಧು–ಸಂತರ ನಿಲುವಾಗಿದೆ ಎಂದರು.
ರಾಮಮಂದಿರ ನಿರ್ಮಾಣ ಬೇಡ ಎಂದು ಮುಸ್ಲಿಂ ಸಮುದಾಯ ಪಟ್ಟು ಹಿಡಿದಿಲ್ಲ. ಹಾಗಾಗಿ, ತೀರ್ಪು ಯಾವುದೇ ಬಂದರೂ ಮುಸ್ಲಿಂರು ವಿರೋಧ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.